ಕರ್ನಾಟಕ

karnataka

ETV Bharat / state

ತಂದೆಯ ಜಮೀನು ಅಡವಿಟ್ಟು ವಿವಾಹ ಮಾಡಿದ್ರೂ ಮಗಳಿಗೆ ಆಸ್ತಿಯಲ್ಲಿ ಸಮಾನ ಹಕ್ಕಿದೆ: ಹೈಕೋರ್ಟ್ - ತುಮಕೂರಿನ ಯಲ್ಲಾಪುರ ಗ್ರಾಮ

ಆಸ್ತಿ ವಿವಾದ ಸಂಬಂಧಿತ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್​, ತಂದೆಯ ಆಸ್ತಿಯಲ್ಲಿ ಪುತ್ರಿಗೂ ಸಮಾನ ಹಕ್ಕಿದೆ ಎಂದು ಹೇಳಿದೆ.

high-court-said-daughter-has-right-in-father-property
ಜಮೀನು ಅಡವಿಟ್ಟು ವಿವಾಹ ಮಾಡಿದ್ರೂ ತಂದೆ ಆಸ್ತಿಯಲ್ಲಿ ಮಗಳಿಗೆ ಹಕ್ಕಿದೆ : ಹೈಕೋರ್ಟ್

By

Published : May 4, 2023, 7:11 AM IST

ಬೆಂಗಳೂರು : ತಂಗಿಯ ವಿವಾಹಕ್ಕಾಗಿ ಜಮೀನು ಅಡಮಾನ ಇಟ್ಟು ಪಡೆದ ಸಾಲ ಈವರೆಗೂ ತೀರಿಲ್ಲ. ಹೀಗಾಗಿ ತಂದೆಯ ಆಸ್ತಿಯಲ್ಲಿ ಸಹೋದರಿಗೆ ಆಸ್ತಿಯಲ್ಲಿ ಭಾಗ ಕೇಳುವ ಹಕ್ಕಿಲ್ಲ ಎಂಬುದಾಗಿ ಸಹೋದರನ ವಾದ ತಿರಸ್ಕರಿಸಿರುವ ಹೈಕೋರ್ಟ್, ತಂದೆಯ ಆಸ್ತಿಯಲ್ಲಿ ಮಗಳಿಗೂ ಸಮಾನ ಹಕ್ಕಿದೆ ಎಂದು ತಿಳಿಸಿದೆ.

ತುಮಕೂರು ಜಿಲ್ಲೆಯ ಯಲ್ಲಾಪುರ ಗ್ರಾಮದ ನಿವಾಸಿಗಳಾದ ವೆಂಕಟೇಶ ಮತ್ತು ಅವರ ತಾಯಿ ವೆಂಕಟಲಕ್ಷ್ಮಮ್ಮ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ತಂದೆಯ ಜಮೀನು ಅಡಮಾನವಿಟ್ಟು ಸಹೋದರಿಗೆ ಮದುವೆ ನೆರವೇರಿಸಿದ್ದು, ಚಿನ್ನಾಭರಣ ಸಹ ಕೊಡಿಸಿದ್ದಾರೆ. ಬಳಿಕ ತಂದೆಯ ಸಾಲ ತೀರಿಸಿ, ಜಮೀನು ಹಿಂದಕ್ಕೆ ಪಡೆಯಲಾಗಿದೆ. ಆದ್ದರಿಂದ ಸಹೋದರಿಗೆ ತಂದೆಯ ಆಸ್ತಿ ಮೇಲೆ ಸಮಾನ ಹಕ್ಕು ಇಲ್ಲ ಮತ್ತು ಆಕೆಗೆ ಆಸ್ತಿಯಲ್ಲಿ ಪಾಲು ಕೊಡಲಾಗದು ಎಂಬ ವಾದ ತಿರಸ್ಕರಿಸಿದ ಹೈಕೋರ್ಟ್, ತಂದೆಯ ಆಸ್ತಿಯಲ್ಲಿ ಪುತ್ರನ ಜೊತೆಗೆ ಪುತ್ರಿಗೂ ಸಮಾನ ಪಾಲಿದೆ ಎಂದು ಆದೇಶಿಸಿತು.

ವಿನೀತಾ ಶರ್ಮಾ ಪ್ರಕರಣದಲ್ಲಿ 'ತಂದೆಯ ಆಸ್ತಿಯಲ್ಲಿ ಪುತ್ರನಿಗೆ ಸರಿಸಮನಾದ ಪಾಲು ಪಡೆಯಲು ಪುತ್ರಿ ಸಹ ಅರ್ಹರಾಗಿರುತ್ತಾರೆ' ಎಂಬುದಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅದರಂತೆ ಈ ಪ್ರಕರಣದಲ್ಲಿ ಮೇಲ್ಮನವಿದಾರ ವೆಂಕಟೇಶ ಅವರ ಸೋದರತ್ತೆಯಾದ ಲಕ್ಷ್ಮಿದೇವಮ್ಮ ಸಹ ಅವರ ತಂದೆಯ ಆಸ್ತಿಯಲ್ಲಿ ಪಾಲು ಹೊಂದಲು (ಸಹೋದರ ಗೋವಿಂದಯ್ಯಗೆ ಸರಿಸಮಾನವಾಗಿ) ಅರ್ಹರಾಗಿದ್ದಾರೆ ಎಂದು ಆದೇಶಿಸಿದೆ.

ತಂದೆ ಕಲಗಿರಿಯಪ್ಪ ಸಾಲ ತೀರಿಸಿದ ಕೂಡಲೇ ವ್ಯಾಜ್ಯಕ್ಕೆ ಸಂಬಂಧಿಸಿದ ಜಮೀನಿನ ಮೇಲೆ ವೈಯಕ್ತಿಕ ಹಕ್ಕು ಸೃಷ್ಟಿಸುವುದಿಲ್ಲ. ಇನ್ನೂ ವಿವಾದಿತ ಜಮೀನು ಗೋವಿಂದಯ್ಯ ಅವರ ಸ್ವಯಾರ್ಜಿತ ಎಂಬುದನ್ನು ಸಾಬೀತುಪಡಿಸುವಲ್ಲಿ ಮೇಲ್ಮನವಿದಾರರು ವಿಫಲವಾಗಿದ್ದಾರೆ ಎಂದು ಅಭಿಪ್ರಾಯಪಟ್ಟು, ಕಲಗಿರಿಯಪ್ಪ ಆಸ್ತಿಯಲ್ಲಿ ಲಕ್ಷ್ಮೀದೇವಮ್ಮ ಅವರಿಗೆ ಪಾಲಿದೆ ಎಂದು ಹೈಕೋರ್ಟ್​ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:ತುಮಕೂರಿನ ಯಲ್ಲಾಪುರ ಗ್ರಾಮದ ನಿವಾಸಿಯಾಗಿದ್ದ ಕಲಗಿರಿಯಪ್ಪ ಎಂಬುವರಿಗೆ ಲಕ್ಷ್ಮೀದೇವಮ್ಮ ಮತ್ತು ಕೆ. ಗೋವಿಂದಯ್ಯ ಎಂಬ ಮಕ್ಕಳು ಇದ್ದರು. ತಂದೆಯ ಆಸ್ತಿಯಲ್ಲಿ ಪಾಲು ಕೋರಿ 2011ರಲ್ಲಿ ಸಿವಿಲ್ ದಾವೆ ಹೂಡಿದ್ದ ಲಕ್ಷ್ಮೀದೇವಮ್ಮ, ತಂದೆ ಕಲಗಿರಿಯಪ್ಪ ಅವರ ಹೆಸರಿನಲ್ಲಿ 1943ರಿಂದ 1949ವರೆಗೆ ವಿವಾದಿತ ಜಮೀನು ನೋಂದಣಿಯಾಗಿದೆ. 1964ರಲ್ಲಿ ತಂದೆ ಮೃತಪಟ್ಟಿದ್ದಾರೆ. ತಂದೆಯ ಆಸ್ತಿಯು ಸಹೋದರ ಗೋವಿಂದಯ್ಯನ ಸ್ವಾಧೀನದಲ್ಲಿದೆ. ಸಹೋದರ ಸಹ ಸಾವನ್ನಪ್ಪಿದ್ದು, ಆತನ ಪತ್ನಿ ಮತ್ತು ಮಕ್ಕಳು ಆಸ್ತಿ ಅನುಭವಿಸುತ್ತಿದ್ದಾರೆ. ಹಾಗಾಗಿ, ಆಸ್ತಿಯಲ್ಲಿ ತನಗೂ ಪಾಲು ನೀಡುವಂತೆ ಸಹೋದರನ ಪುತ್ರ ಮತ್ತು ಪತ್ನಿಗೆ (ಮೇಲ್ಮನವಿದಾರರು) ಆದೇಶಿಸಬೇಕು ಎಂದು ಕೋರಿದ್ದರು.

ದಾವೆಯ ವಿಚಾರಣೆ ನಡೆಸಿದ್ದ ಸಿವಿಲ್ ನ್ಯಾಯಾಲಯ, ಲಕ್ಷ್ಮೀದೇವಮ್ಮಗೆ ಅವರ ತಂದೆಯ ಆಸ್ತಿಯಲ್ಲಿ ಪಾಲು ಇದೆ ಎಂದು 2018ರಲ್ಲಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಗೋವಿಂದಯ್ಯ ಪುತ್ರ ವೆಂಕಟೇಶ್ ಮತ್ತು ಪತ್ನಿ ವೆಂಕಟಲಕ್ಷ್ಮಪ್ಪ ಹೈಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಮೇಲ್ಮನವಿದಾರ ಪರ ವಕೀಲರು, 1963ರಲ್ಲಿ ಲಕ್ಷ್ಮೀದೇವಮ್ಮ ಅವರಿಗೆ ಮದುವೆ ಮಾಡಲಾಗಿದೆ. ಕಲಗಿರಿಯಪ್ಪ ಅವರು 1964ರಲ್ಲಿ ಸಾವನ್ನಪ್ಪಿದ್ದರು. ಅವರ ಪುತ್ರ ಗೋವಿಂದಯ್ಯ ಅವರಿಗೆ ಉತ್ತರಾಧಿಕಾರಿಯಾಗಿದ್ದರು. ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಎರಡು ಎಕರೆ ಜಮೀನನ್ನು ಕಲಗಿರಿಯಪ್ಪ ಅಡಮಾನವಿಟ್ಟು ಸಾಲ ಪಡೆದಿದ್ದರು. ಆ ಸಾಲದಲ್ಲೇ ಲಕ್ಷ್ಮೀದೇವಮ್ಮ ಅವರಿಗೆ ಮದುವೆ ಮಾಡಲಾಗಿತ್ತು. ಆಕೆಗೆ ಚಿನ್ನಾಭರಣ ಸೇರಿದಂತೆ ಸಾಕಷ್ಟು ಬೆಲೆಬಾಳುವ ವಸ್ತುಗಳನ್ನು ನೀಡಿದ್ದಾರೆ. ಲಕ್ಷ್ಮೀದೇವಮ್ಮ ಮದುವೆಯಾದ ಕೂಡಲೇ ಅವರು ಅವಿಭಕ್ತ ಕುಟುಂಬದ ಸದಸ್ಯರಾಗುತ್ತಾರೆ ಎಂದು ತಿಳಿಸಿದ್ದರು.

ಅಲ್ಲದೆ, 1971ರಲ್ಲಿ ಗೋವಿಂದಯ್ಯ ಪೊಲೀಸ್ ಇಲಾಖೆ ಸೇವೆಗೆ ಸೇರಿದ್ದರು. ನಂತರ ಸಾಲ ತೀರಿಸಿದ ಕಾರಣ ಆಸ್ತಿಯನ್ನು ಹರಾಜಿಗೆ ಇಡಲಾಗಿತ್ತು. ಸಾಲವನ್ನು ಗೋವಿಂದಪ್ಪ ತೀರಿಸಿ, ಆಸ್ತಿಯನ್ನು ದಕ್ಕಿಸಿಕೊಂಡಿದ್ದರು. ಇದರಿಂದ ಜಮೀನನ್ನು ಗೋವಿಂದಯ್ಯ ಅವರೇ ಸ್ವತಃ ಸಂಪಾದಿಸಿದಂತೆ ಆಗುತ್ತದೆ. ಆದ್ದರಿಂದ ಲಕ್ಷ್ಮೀದೇವಮ್ಮ ಅವರಿಗೆ ಆಸ್ತಿ ಮೇಲೆ ಹಕ್ಕು ಸೃಷ್ಟಿಯಾಗುವುದಿಲ್ಲ ಎಂದು ವಾದ ಮಂಡಿಸಿದ್ದರು.

ABOUT THE AUTHOR

...view details