ಕರ್ನಾಟಕ

karnataka

ETV Bharat / state

ಕೊರೊನಾ ವಾರಿಯರ್ಸ್​ಗೆ ಸಶಸ್ತ್ರ ಪಡೆಯ ಭದ್ರತೆ ನೀಡುವ ಬಗ್ಗೆ ಸರ್ಕಾರದ ನಿಲುವು ಕೇಳಿದ ಹೈಕೋರ್ಟ್‌

ಈಚೆಗೆ ನಡೆದ ಪಾದರಾಯನಪುರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರೊನಾ ವಿರುದ್ಧ ಹೋರಾಡುತ್ತಿರುವ ಸಿಬ್ಬಂದಿಗೆ ಸಶಸ್ತ್ರ ಪಡೆಯ ಭದ್ರತೆ ಒದಗಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್​ ಸೂಚನೆ ನೀಡಿದೆ.

High Court review to provide security to the armed forces
ವೈದ್ಯಕೀಯ ಸಿಬ್ಬಂದಿಗೆ ಸಶಸ್ತ್ರ ಪಡೆ ಭದ್ರತೆ ಚಿಂತನೆ

By

Published : Apr 21, 2020, 8:13 PM IST

ಬೆಂಗಳೂರು: ನಗರದ ಪಾದರಾಯನಪುರದಲ್ಲಿ ಕೊರೊನಾ ಶಂಕಿತರನ್ನು ಕ್ವಾರಂಟೈನ್‌ಗೆ ಒಳಪಡಿಸಲು ಮುಂದಾದ ಪೊಲೀಸರು, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ಪ್ರಕರಣ ಕುರಿತಂತೆ ಹೈಕೋರ್ಟ್‌ ತೀವ್ರ ಬೇಸರ ವ್ಯಕ್ತಪಡಿಸಿದೆ.

ವೈದ್ಯಕೀಯ ಸಿಬ್ಬಂದಿಗೆ ಸಶಸ್ತ್ರ ಪಡೆ ಭದ್ರತೆಗೆ ಸರ್ಕಾರದ ನಿಲುವು ಕೇಳಿದ ಹೈಕೋರ್ಟ್

ಇದೇ ವೇಳೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸಶಸ್ತ್ರ ಪಡೆಯ ಭದ್ರತೆ ಒದಗಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ.

ಪಾದರಾಯನಪುರದಲ್ಲಿ ಕೊರೊನಾ ವಾರಿಯರ್ಸ್‌ ಮೇಲೆ ದಾಳಿ ನಡೆಸಿದವರ ಮೇಲೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತೆ ಹಾಗೂ ವಕೀಲರಾದ ಗೀತಾ ಮಿಶ್ರಾ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಜಿ‌.ಆರ್.ಮೋಹನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದು, ಪಾದರಾಯನಪುರದಲ್ಲಿ ನಡೆದಿದ್ದ ಘಟನೆಯ ವಿವರಗಳನ್ನು ಪೀಠಕ್ಕೆ ತಿಳಿಸಿದರು.

ಘಟನೆಯ ಎಲ್ಲಾ ವಿವರಗಳನ್ನು ಆಲಿಸಿದ ಪೀಠ, ಕೊರೊನಾ ವಾರಿಯರ್ಸ್‌ ಭದ್ರತೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿತು. ತಮ್ಮ ಬದುಕು ಮುಡಿಪಿಟ್ಟು ಕೆಲಸ ಮಾಡುತ್ತಿರುವ ವೈದ್ಯರು, ಆರೋಗ್ಯ ಕಾರ್ಯಕರ್ತರು ಹಾಗೂ ಪೊಲೀಸರ ಮೇಲೆ ಇಂತಹ ದಾಳಿಗಳು ನಡೆಯುತ್ತಿದ್ದರೆ ಅವರು ಕರ್ತವ್ಯ ನಿರ್ವಹಣೆ ಮಾಡುವುದಾದರೂ ಹೇಗೆ ಎಂದು ಬೇಸರ ವ್ಯಕ್ತಪಡಿಸಿತು. ನಂತರ, ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು.

ಇವರಿಗೆ ಸೂಕ್ತ ಭದ್ರತೆ ನೀಡಲು ಯಾವ ಮಾರ್ಗಸೂಚಿಗಳನ್ನು ಸರ್ಕಾರ ರೂಪಿಸಿದೆ? ಇವರಿಗೆ ಸಶಸ್ತ್ರ ಪಡೆಯ ಭದ್ರತೆ ನೀಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ ಮುಂದಿನ ವಿಚಾರಣೆ ವೇಳೆ ಮಾಹಿತಿ ನೀಡುವಂತೆ ಸೂಚಿಸಿದೆ. ವಿಚಾರಣೆಯನ್ನು ಏಪ್ರಿಲ್​ 24ಕ್ಕೆ ಮುಂದೂಡಿದೆ. ಇದೇ ವೇಳೆ ಪಾದರಾಯನಪುರದಲ್ಲಿ ನಡೆದ ಘಟನೆ‌ ಸಂಬಂಧ ಕೈಗೊಂಡಿರುವ ಕ್ರಮಗಳೇನು? ಇಂತಹ ದುರ್ಘಟನೆಗಳು ಮರುಕಳಿಸದಂತೆ ಯಾವೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ ವರದಿ ಸಲ್ಲಿಸುವಂತೆಯೂ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ABOUT THE AUTHOR

...view details