ಬೆಂಗಳೂರು: ಪಾಪ್ಯುಲರ್‌ಫ್ರಂಟ್ ಆಫ್ ಇಂಡಿಯಾ ಸಂಘಟನೆ ನಿಷೇಧ ಮಾಡಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ತೀರ್ಪನ್ನು ಕಾಯ್ದಿರಿಸಿದೆ. ಬೆಂಗಳೂರಿನ ವಾಸಿ ಹಾಗೂ ಕರ್ನಾಟಕದ ಪಿಎಫ್‌ಐ ಅಧ್ಯಕ್ಷ ನಾಸಿರ್‌ಅಲಿ ಸಲ್ಲಿಸಿದ್ದ ಅರ್ಜಿ ಕುರಿತಂತೆ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಸೋಮವಾರ ವಿಚಾರಣೆ ಪೂರ್ಣಗೊಳಿಸಿದೆ.
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಜಯಕುಮಾರ್ ಪಾಟೀಲ್, ದೇಶದ್ರೋಹ ಚಟುವಟಿಕೆಗಳ ನಿಯಂತ್ರಣ ಕಾಯಿದೆ(ಯುಎಪಿಎ) 1967, ಸೆಕ್ಷನ್ 3, ಉಪ ನಿಯಮ 3ರಡಿ ಪಿಎಫ್‌ಐ ನಿರ್ಬಂಧ ಮಾಡಿರುವುದು ಕಾನೂನು ಬಾಹಿರವಾಗಿದೆ. ಪಿಎಫ್‌ಐ ಸಂಘಟನೆಯನ್ನು ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಿರುವುದು ಸಂವಿಧಾನ ವಿರೋಧಿ ಕ್ರಮವಾಗಿದೆ. ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸುವುದಕ್ಕೆ ಮತ್ತು ಆ ನಿಷೇಧ ತಕ್ಷಣದಿಂದಲೇ ಅನ್ವಯಿಸಿರುವುದಕ್ಕೆ ಪ್ರತ್ಯೇಕ ಕಾರಣವನ್ನು ಆದೇಶದಲ್ಲಿ ತಿಳಿಸಿಲ್ಲ ಎಂದರು.