ಬೆಂಗಳೂರು: ಶಾಲಾ ಶುಲ್ಕ ವಿವಾದ ಬಗೆಹರಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಲು ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಮಧ್ಯಂತರ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ಆದೇಶ ಕಾಯ್ದಿರಿಸಿದೆ.
ಶಾಲಾ ಶುಲ್ಕದಲ್ಲಿ ಶೇ.30ರಷ್ಟು ಕಡಿತ ಮಾಡಿ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಖಾಸಗಿ ಅನುದಾನ ರಹಿತ ಶಾಲೆಗಳು ಸಲ್ಲಿಸಿರುವ ತಕರಾರು ಅರ್ಜಿ ಹಾಗೂ ಶಾಲಾ ಶುಲ್ಕಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಶಾಲಾ ಆಡಳಿತ ಮಂಡಳಿಗಳ ನಡುವಿನ ವಿವಾದವನ್ನು ಬಗೆಹರಿಸಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ಅನುಮತಿ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಇಂದು ನ್ಯಾ. ಸಚಿನ್ ಶಂಕರ್ ಮಗದಂ ಅವರಿದ್ದ ಪೀಠ ವಿಚಾರಣೆ ನಡೆಸಿತು. ಸುದೀರ್ಘ ವಾದ-ಪ್ರತಿವಾದ ಆಲಿಸಿದ ಪೀಠ ಮಧ್ಯಂತರ ಅರ್ಜಿ ಸಂಬಂಧಿತ ಆದೇಶವನ್ನು ಕಾಯ್ದಿಸಿರಿ, ಮೂಲ ಅರ್ಜಿ ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿತು.
ಸರ್ಕಾರ-ಶಾಲೆಗಳ ನಡುವಿನ ವಾದ :
ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಕೋವಿಡ್ ಸಂಕಷ್ಟದ ಸಮಯದಲ್ಲಿ ಮಕ್ಕಳು ಹಾಗೂ ಪೋಷಕರ ಹಿತ ಕಾಪಾಡಬೇಕಿದೆ. ಇದು ಸರ್ಕಾರ ಹಾಗೂ ಖಾಸಗಿ ಶಾಲೆಗಳ ನಡುವಿನ ಜಗಳವಲ್ಲ. ಹೀಗಾಗಿಯೇ, ಶುಲ್ಕ ನಿಗದಿಗೆ ಹೈಕೋರ್ಟ್ನ ನಿವೃತ್ತ ನ್ಯಾಯಾಮೂರ್ತಿ ನೇತೃತ್ವದ ಸಮಿತಿ ರಚನೆ ಮಾಡಲು ಚಿಂತಿಸಲಾಗಿದೆ. ಸಮಿತಿಯಲ್ಲಿ ಖಾಸಗಿ ಶಾಲೆ ಹಾಗೂ ಪೋಷಕರ ಪ್ರತಿನಿಧಿಗಳು ಇರಲಿದ್ದು, ಇಬ್ಬರ ಮನವಿಗಳನ್ನೂ ಆಲಿಸಲಾಗುವುದು. ಬಳಿಕ ನ್ಯಾಯಮೂರ್ತಿಗಳ ಸಮಿತಿ ನೀಡುವ ಶಿಫಾರಸ್ಸನ್ನು ಹೈಕೋರ್ಟ್ ಮುಂದಿಟ್ಟು, ನ್ಯಾಯಾಲಯ ಅನುಮತಿ ನಂತರವೇ ಕ್ರಮ ಕೈಗೊಳ್ಳುತ್ತೇವೆ ಎಂದರು.
ಅಲ್ಲದೇ, ಈ ಹಿಂದೆ ಹೈಕೋರ್ಟ್ ಪೋಷಕರಿಗೂ ಒತ್ತಡ ಹಾಕದಂತೆ ಸೂಚಿಸಿತ್ತು. ಆದರೆ, ಸಂಕಷ್ಟದ ಸಮಯದಲ್ಲಿ ಪೋಷಕರ ಕಷ್ಟಕ್ಕೆ ಶಾಲೆಗಳು ಸ್ಪಂದಿಸಿಲ್ಲ. ಬದಲಿಗೆ ಖಾಸಗಿ ಶಾಲೆಗಳು ಕಿರುಕುಳ ನೀಡುತ್ತಿರುವ ಕುರಿತು ಹಲವು ಪೋಷಕರು ಸರ್ಕಾರಕ್ಕೆ ದೂರು ನೀಡಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಹಣ ಪಾವತಿಗೆ ಸಾಧ್ಯವಿಲ್ಲ ಎಂದು ಸಿಎಂಗೆ ಮನವಿ ಮಾಡಿದ್ದಾರೆ. ಇನ್ನು, ಪೋಷಕರಿಗೆ ಕಿರುಕುಳ ನೀಡಿದ ಶಾಲೆಗಳ ವಿವರ ಬಿಇಒಗಳ ಬಳಿ ಇದೆ. ಅಂತಹ ಶಾಲೆಗಳ ವಿರುದ್ಧ ಕ್ರಮ ಜರುಗಿಸಲು ನ್ಯಾಯಾಲಯ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ:ಸೋಂಕಿನಿಂದ ಗುಣಮುಖರ ಪ್ರಮಾಣ ಹೆಚ್ಚಳ : 10,722 ಮಂದಿ ಚೇತರಿಕೆ
ಸರ್ಕಾರದ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಖಾಸಗಿ ಶಾಲೆಗಳ ಒಕ್ಕೂಟದ ಪರ ವಕೀಲರು, ಅನುದಾನ ರಹಿತ ಖಾಸಗಿ ಶಾಲೆಗಳು ತಮ್ಮ ಶಿಕ್ಷಕರು, ಸಿಬ್ಬಂದಿಗೆ ಸಂಬಳ ಪಾವತಿಸಲು ಸಾಕಷ್ಟು ತೊಂದರೆ ಎದುರಿಸುತ್ತಿವೆ. ರಾಜ್ಯದಲ್ಲಿ ಹಲವು ಅಂತಾರಾಷ್ಟ್ರೀಯ ಮಟ್ಟದ ಶಾಲೆಗಳಿವೆ. ಈ ಶಾಲೆಗಳ ಪೋಷಕರು ಶುಲ್ಕ ಪಾವತಿಸಲು ಸಿದ್ಧರಿದ್ದಾರೆ. ಆದರೆ, ಸರ್ಕಾರವೇ ಅಡ್ಡಗಾಲು ಹಾಕುತ್ತಿದೆ. ಹೀಗಾಗಿ, ಸಮಿತಿ ರಚನೆ ಮಾಡಲು ಅನುಮತಿಸಬಾರದು ಎಂದರು ಕೋರಿದರು.