ಬೆಂಗಳೂರು :ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಮತ್ತು ಇತರ 11 ಮಂದಿ ಸದಸ್ಯರ ನೇಮಕಾತಿ ಆದೇಶ ರದ್ದು ಮಾಡುವಂತೆ ಕೋರಿ ಸಲ್ಲಿಸಲಾಗಿರುವ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್) ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ಈ ಬಗ್ಗೆ ಆದೇಶವನ್ನು ಕಾಯ್ದಿರಿಸಿತು.
ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ನೇಮಿಸಿದ ಆದೇಶ ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಶಶಿ ಪ್ರಸಾದ್ ಗಾಂಧಿ ಮತ್ತು 11 ಮಂದಿ ಕೆಪಿಎಸ್‌ಸಿ ಸದಸ್ಯರ ನೇಮಕಾತಿ ಪ್ರಶ್ನಿಸಿ ಟಿ. ನರಸಿಂಹ ಮೂರ್ತಿ ಸಲ್ಲಿಸಿದ್ದ ಅರ್ಜಿಗಳ ಕುರಿತು ಸುದೀರ್ಘ ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಎಂಜಿಎಸ್ ಕಮಲ್ ಅವರಿದ್ದ ನ್ಯಾಯಪೀಠ ಅಂತಿಮ ಆದೇಶವನ್ನು ಕಾಯ್ದಿರಿಸಿದೆ.
ಅರ್ಜಿದಾರ ಟಿ. ನರಸಿಂಹಮೂರ್ತಿ ಪರ ವಕೀಲ ಎಸ್. ಉಮಾಪತಿ, ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿಗೆ ನಿರ್ದಿಷ್ಟ ನಿಯಮಗಳನ್ನು ರೂಪಿಸಬೇಕು. ಆ ನಿಯಮಗಳನ್ನು ರೂಪಿಸುವವರೆಗೆ ಕೇಂದ್ರ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಪಿ.ಸಿ. ಹೋಟಾ ಅವರ ನೇತೃತ್ವದ ಸಮಿತಿ ಶಿಫಾರಸುಗಳನ್ನು ಮಾಡಿದೆ. ಈ ಶಿಫಾರಸು ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು 2016ರಲ್ಲಿ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿತ್ತು. ಆದರೆ, ಹೋಟಾ ಸಮಿತಿ ಮಾರ್ಗಸೂಚಿಯಂತೆ ಶೋಧನಾ ಸಮಿತಿ ರಚಿಸದೆ ಮತ್ತು ಯಾವುದೇ ನಿಯಮ ರೂಪಿಸದೆ ರಾಜ್ಯ ಸರ್ಕಾರವು ಕೆಪಿಎಸ್‌ಎಸಿಗೆ ಸದಸ್ಯರನ್ನು ನೇಮಕ ಮಾಡಲಾಗಿದೆ. ಹಾಗಾಗಿ, ಕೆಪಿಎಸ್‌ಸಿ ಸದಸ್ಯರನ್ನು ನೇಮಕಾತಿ ಆದೇಶ ರದ್ದುಪಡಿಸಬೇಕು ಮತ್ತು ಹೋಟಾ ಸಮಿತಿ ಅನುಸಾರ ಹೊಸದಾಗಿ ಸದಸ್ಯರನ್ನು ನೇಮಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ನ್ಯಾಯಪೀಠವನ್ನು ಕೋರಿದರು.