ಬೆಂಗಳೂರು :ದೇವರ ಪೂಜೆ, ಉತ್ಸವಗಳನ್ನು ನಡೆಸುವ ಕುರಿತು ಪ್ರತಿಬಾರಿಯೂ ನ್ಯಾಯಾಲಯವೇ ತೀರ್ಮಾನಿಸಬೇಕು ಎಂಬಂತೆ ವರ್ತಿಸುತ್ತಿದ್ದೀರಿ. ನೀವು ಮಠ ನಡೆಸುತ್ತಿದ್ದೀರೋ ಅಥವಾ ಕಾಲೇಜನ್ನೋ ಎಂದು ಹೈಕೋರ್ಟ್ ಪೀಠವು ಮಂತ್ರಾಲಯ ಹಾಗೂ ಉತ್ತರಾದಿ ಮಠಗಳ ಕುರಿತು ಬೇಸರ ವ್ಯಕ್ತಪಡಿಸಿದೆ.
ಕೊಪ್ಪಳದ ಆನೆಗೊಂದಿಯಲ್ಲಿರುವ ನವ ವೃಂದಾವನದಲ್ಲಿ 2021ರ ಡಿ.2ರಿಂದ ಆರಂಭವಾಗಲಿರುವ ಪದ್ಮನಾಭ ತೀರ್ಥರ 697ನೇ ಆರಾಧನಾ ಮಹೋತ್ಸವವನ್ನು ಯಾರು ನಡೆಸಬೇಕೆಂಬ ಕುರಿತು ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠ ಹಾಗೂ ಉತ್ತರಾದಿ ಮಠಗಳ ನಡುವೆ ಏರ್ಪಟ್ಟಿರುವ ವಿವಾದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಈ ಅಸಮಾಧಾನ ವ್ಯಕ್ತಪಡಿಸಿದೆ.
ವಿಚಾರಣೆ ವೇಳೆ ಎರಡೂ ಮಠಗಳ ಪರ ವಕೀಲರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ಪೀಠ, ಎರಡೂ ಮಠಗಳಿಗೆ ಅತಿ ದೊಡ್ಡ ಪರಂಪರೆ ಇದೆ. ಆದರೆ, ಇಬ್ಬರೂ ಪ್ರತಿಬಾರಿ ಕೋರ್ಟ್ ಆದೇಶ ಪಡೆದೇ ಆರಾಧನೆ ಮಾಡುವುದನ್ನು ನೋಡಿದರೆ ನೀವು ಮಠ ನಡೆಸುತ್ತಿದ್ದೀರೊ ಅಥವಾ ಕಾಲೇಜು ನಡೆಸುತ್ತಿದ್ದೀರೊ ಎಂಬ ಅನುಮಾನ ಮೂಡುತ್ತಿದೆ ಎಂದು ಗರಂ ಆಗಿದೆ.