ಬೆಂಗಳೂರು:ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆಸಬೇಕಿರುವ ಚುನಾವಣೆಗಳನ್ನು 2021ರ ಡಿಸೆಂಬರ್ ಅಂತ್ಯದವರೆಗೆ ಮುಂದೂಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿ ಸಚಿವ ಸಂಪುಟ ಕೈಗೊಂಡಿರುವ ನಿರ್ಣಯಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಕುರಿತು ವಿವರಣೆ ನೀಡುವಂತೆ ತಾಕೀತು ಮಾಡಿದೆ.
ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸದ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಅಗತ್ಯ ನಿರ್ದೇಶನ ನೀಡಲು ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ, ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ ಕೋವಿಡ್ 2ನೇ ಅಲೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು 2021ರ ಡಿಸೆಂಬರ್ ಅಂತ್ಯದವರೆಗೆ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿ ಮೇ .17ರಂದು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ ಎಂದು ತಿಳಿಸಿ ಸಂಬಂಧಿಸಿದ ದಾಖಲೆಗಳನ್ನು ಪೀಠಕ್ಕೆ ಸಲ್ಲಿಸಿದರು.
ಸರ್ಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪೀಠ, ಕೋವಿಡ್ ನೆಪ ಒಡ್ಡಿ ಚುನಾವಣೆಗಳನ್ನು ಮುಂದೂಡಲು ಮುಂದಾಗಿದ್ದೀರಿ. ಧಾರ್ಮಿಕ ಕೇಂದ್ರಗಳಿಗೆ, ಮಾಲ್ ಗಳಿಗೆ ಹೋಗುವ ಜನ ಮತಗಟ್ಟೆಗಳಿಗೆ ಹೋಗುವುದಿಲ್ಲವೆ. ರಾಜ್ಯದಲ್ಲಿ ಪರಿಸ್ಥಿತಿ ಬಹುತೇಕ ಸುಧಾರಿಸಿದೆ. ನಿರ್ಬಂಧಗಳನ್ನು ಸಡಿಲಿಸಿದ್ದೀರಿ, ಹೀಗಿದ್ದೂ ಚುನಾವಣೆ ನಡೆಸಲು ಕಷ್ಟ ಏನು?, ಕಾಲಮಿತಿಯೊಳಗೆ ಚುನಾವಣೆ ನಡೆಸುವ ಸಾಂವಿಧಾನಿಕ ಬಾಧ್ಯತೆ ನಿಮಗಿಲ್ಲವೆ ಎಂದು ಕಟುವಾಗಿ ಪೀಠ ಪ್ರಶ್ನಿಸಿತು. ಚುನಾವಣೆಗಳನ್ನು ಮುಂದೂಡುವ ಸಂಬಂಧ ಸಚಿವ ಸಂಪುಟ ಕೈಗೊಂಡಿರುವ ನಿರ್ಣಯಕ್ಕೆ ವಿವರಣೆಯನ್ನು ಪ್ರಮಾಣಪತ್ರದ ಮೂಲಕ ಸಲ್ಲಿಸಬೇಕು ಎಂದು ತಾಕೀತು ಮಾಡಿತು.
ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ರಾಜ್ಯ ಚುನಾವಣಾ ಆಯೋಗದ ಪರ ವಕೀಲ ಕೆ. ಎನ್. ಫಣೀಂದ್ರ ಮಾಹಿತಿ ನೀಡಿ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಮಹಾನಗರ ಪಾಲಿಕೆಗಳು ಹಾಗೂ ದೊಡ್ಡಬಳ್ಳಾಪುರ ನಗರಸಭೆ ಮತ್ತು ತರೀಕೆರೆ ಪುರಸಭೆ ಚುನಾವಣೆಗೆ ವೇಳಾಪಟ್ಟಿ ನಿಗದಿಪಡಿಸುವ ಸಂಬಂಧ ಜುಲೈ 28ರಂದು ಸಭೆ ನಡೆಸಿದ್ದು, ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದರು.
ಓದಿ: 29 ಸಚಿವರ ಪ್ರಮಾಣ : ಬೊಮ್ಮಾಯಿ ಸಂಪುಟ ಬಹುತೇಕ ಭರ್ತಿ
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸ್ಥಳೀಯ ಸಂಸ್ಥೆಗಳಿಗೆ ಸಂವಿಧಾನದ ವಿಧಿ 243(ಯು) ಪ್ರಕಾರ ನಿಗದಿತ ಕಾಲಮಿತಿಯೊಳಗೆ ಚುನಾವಣೆ ನಡೆಸಬೇಕು ಎಂದು ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡಿದೆ. ಹೀಗಾಗಿ ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು. ಸರ್ಕಾರದ ನಿರ್ಣಯವನ್ನು ಚುನಾವಣಾ ಆಯೋಗ ತನ್ನ ಕರ್ತವ್ಯಕ್ಕೆ ಅಡ್ಡಿ ಎಂದುಕೊಳ್ಳುವ ಅಗತ್ಯವಿಲ್ಲ. ಆದಷ್ಟು ಬೇಗ ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಕುರಿತು ಆಯೋಗ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಆಗಸ್ಟ್ .13ಕ್ಕೆ ಮುಂದೂಡಿತು.