ಬೆಂಗಳೂರು: ಮಾಹಿತಿ ನೀಡದೆ ಪತ್ನಿಯೊಬ್ಬರು ಮಗುವನ್ನು ಭಾರತಕ್ಕೆ ಕರೆತಂದಿರುವ ಕ್ರಮ ಪ್ರಶ್ನಿಸಿ ಪತಿಯೊಬ್ಬರು ತನ್ನ ಮಗುವನ್ನು ಹಿಂದಿರುಗಿಸುವಂತೆ ಕೋರಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್ ರದ್ದು ಪಡಿಸಿ ಆದೇಶಿಸಿದೆ. ಜರ್ಮನಿಯಲ್ಲಿ ನೆಲೆಸಿರುವ ಭಾರತೀಯ ಮೂಲದ ಶಂಕರ್ ವಿಶ್ವನಾಥನ್ ಎಂಬುವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ವಿಜಯ್ಕುಮಾರ್ ಎ.ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಮಗು ತಾಯಿ ಮತ್ತು ಅಜ್ಜ-ಅಜ್ಜಿಯೊಂದಿಗೆ ನೆಲೆಸಿದೆ. ಪತ್ನಿ ಮಗುವನ್ನು ನೋಡಿಕೊಳ್ಳಲು ಸೂಕ್ತರಾಗಿಲ್ಲ ಎಂಬ ಬಗ್ಗೆ ಪತಿ ಯಾವುದೇ ಆಕ್ಷೇಪ ಮಾಡಿಲ್ಲ. ತಾತ ಮತ್ತು ಅಜ್ಜಿಯ ಪ್ರೀತಿ ಮತ್ತು ವಾತ್ಸಲ್ಯವು ಮಗುವಿನ ಉತ್ತಮ ಮತ್ತು ಸಮಗ್ರ ಬೆಳವಣಿಗೆಗೆ ಅತ್ಯಗತ್ಯವಾಗಿದೆ. ಇದು ಜರ್ಮನಿಯಲ್ಲಿ ಕೆಲಸ ಮಾಡುತ್ತಾ, ಒಬ್ಬಂಟಿಯಾಗಿ ನೆಲೆಸಿರುವ ತಂದೆಯಿಂದ ಸಿಗುವುದಿಲ್ಲ. ಹಾಗಾಗಿ, ಈ ಹಂತದಲ್ಲಿ ಪತ್ನಿ ಜರ್ಮಿನಗೆ ತೆರಳಲು ಸೂಚಿಸಿದರೆ, ಮಗುವಿನ ವಾತಾವರಣ ದಿಢೀರ್ ಬದಲಾಗಲಿದೆ. ಮಗುವಿನ ದಿನನಿತ್ಯದ ಚಟುವಟಿಕೆ ಮತ್ತು ಶಿಕ್ಷಣದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಮಗುವನ್ನು ಜರ್ಮಿನ್ಗೆ ಕಳುಹಿಸಿಕೊಡಲು ಅರ್ಜಿದಾರರ ಪತ್ನಿಗೆ ನಿರ್ದೇಶಿಸಲು ಸಾಧ್ಯವಿಲ್ಲ.
ಅಲ್ಲದೆ, ಪ್ರಕರಣದಲ್ಲಿ ಶಂಕರ್ ಅವರ ಪುತ್ರನನ್ನು ಪತ್ನಿ ರಮ್ಯಾ ಅವರ ಮಧ್ಯಂತರ ಸುಪರ್ದಿಗೆ ನೀಡಿ 2017ರ ಜೂ.8ರಂದು ಬೆಂಗಳೂರಿನ 4ನೇ ಕೌಟುಂಬಿಕ ನ್ಯಾಯಾಲಯವು ಆದೇಶ ಮಾಡಿದೆ. ಈ ಆದೇಶವು ಇಂದಿಗೂ ಜಾರಿಯಲ್ಲಿದೆ. ಹಾಗೆಯೇ, ಜರ್ಮನಿ ನ್ಯಾಯಾಲಯದಲ್ಲಿ ಮಗುವಿನ ಸುಪರ್ದಿ ವ್ಯಾಜ್ಯವನ್ನು ಭಾರತದ ನ್ಯಾಯಾಲಯಕ್ಕೆ ಮುಂದುವರಿಸುವುದಾಗಿ ಪತಿ-ಪತ್ನಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ನ್ಯಾಯಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು?ಶಂಕರ್ ಮತ್ತು ಪತ್ನಿ ರಮ್ಯಾ 2013ರಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಮದುವೆಯ ನಂತರ ರಮ್ಯಾ ಪತಿಯೊಂದಿಗೆ ಜರ್ಮನಿಗೆ ತೆರಳಿ ಅಲ್ಲೇ ನೆಲೆಸಿದ್ದರು. 2016ರ ಅ.21ರಂದು ದಂಪತಿಗೆ ಜರ್ಮನಿಯಲ್ಲೇ ಗಂಡು ಮಗು ಜನಿಸಿತ್ತು. ಕೌಟುಂಬಿಕ ಕಲಹ ಉಂಟಾದ ಹಿನ್ನೆಲೆಯಲ್ಲಿ 2017ರ ಮೇ 16ರಂದು ಮಗನೊಂದಿಗೆ ರಮ್ಯಾ ಬೆಂಗಳೂರಿಗೆ ಬಂದಿದ್ದರು. ನಂತರ ಶಂಕರ್ 2017ರ ಮೇ 17ರಂದು ಜರ್ಮನಿಯ ಸ್ಥಳೀಯ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿ, ಮಗುವನ್ನು ತನ್ನ ಸುಪರ್ದಿಗೆ ನೀಡಲು ಪತ್ನಿಗೆ ಆದೇಶಿಸುವಂತೆ ಕೋರಿದ್ದರು. ಇದಾದ ನಂಂತರ ಜರ್ಮನಿ ನ್ಯಾಯಾಲಯವು ಮಗನನ್ನು ಶಂಕರ್ ಸುಪರ್ದಿಗೆ ನೀಡಿತ್ತು. ಜೊತೆಗೆ, ಮಗನನ್ನು ಜರ್ಮಿನಿ ಗಡಿಯಿಂದ ಹೊರಗಡೆ ಕರೆದೊಯ್ಯಬಾರದು ಎಂದು ನಿರ್ದೇಶಿಸಿ 2017ರ ಮೇ 17ರಂದು ಆದೇಶಿಸಿತ್ತು. ಆದರೆ, ಅಷ್ಟೊತ್ತಿಗಾಗಲೇ ರಮ್ಯಾ ಮಗನನ್ನು ಭಾರತಕ್ಕೆ ಕರೆತಂದಿದ್ದರು.