ಕರ್ನಾಟಕ

karnataka

ETV Bharat / state

ವಿದೇಶಿ ಪ್ರಜೆಯ ಹೇಬಿಯಸ್ ಕಾರ್ಪಸ್ ಅರ್ಜಿ: ಸರ್ಕಾರದ ಬಂಧನ ಆದೇಶ ಎತ್ತಿಹಿಡಿದ ಹೈಕೋರ್ಟ್ - ಮಾದಕ ವಸ್ತು ಪೂರೈಸುತ್ತಿದ್ದ ವಿದೇಶಿ ಪ್ರಜೆ ಬಂಧನ

ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟ್ಯಾನ್ಸ್’ ಕಾಯ್ದೆ-1988ರ ಸೆಕ್ಷನ್ 3(1)ರ ಅಡಿಯಲ್ಲಿ ತಮ್ಮ ವಿರುದ್ಧ ಹೊರಡಿಸಿದ್ದ ಬಂಧನ ಆದೇಶ ರದ್ದುಪಡಿಸುವಂತೆ ಕೋರಿ ನೈಜೀರಿಯಾ ಪ್ರಜೆ ನಾನ್ಸೋ ಜೋಚಿನ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್​​ ವಜಾಗೊಳಿಸಿದೆ.

ವಿದೇಶಿ ಪ್ರಜೆಯ ಹೇಬಿಯಸ್ ಕಾರ್ಪಸ್ ಅರ್ಜಿ: ಸರ್ಕಾರದ ಬಂಧನ ಆದೇಶ ಎತ್ತಿಹಿಡಿದ ಹೈಕೋರ್ಟ್
ವಿದೇಶಿ ಪ್ರಜೆಯ ಹೇಬಿಯಸ್ ಕಾರ್ಪಸ್ ಅರ್ಜಿ: ಸರ್ಕಾರದ ಬಂಧನ ಆದೇಶ ಎತ್ತಿಹಿಡಿದ ಹೈಕೋರ್ಟ್

By

Published : Apr 7, 2022, 6:04 PM IST

ಬೆಂಗಳೂರು: ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ವಿದೇಶಿ ಪ್ರಜೆಯನ್ನು ಬಂಧಿಸಲು ನಗರ ಪೊಲೀಸರು ಹೊರಡಿಸಿದ್ದ ಆದೇಶ ಹಾಗೂ ಅದನ್ನು ಅನುಮೋದಿಸಿದ್ದ ಸರ್ಕಾರದ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ. 'ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟ್ಯಾನ್ಸ್’ ಕಾಯ್ದೆ-1988ರ ಸೆಕ್ಷನ್ 3(1)ರ ಅಡಿಯಲ್ಲಿ ತಮ್ಮ ವಿರುದ್ಧ ಹೊರಡಿಸಿದ್ದ ಬಂಧನ ಆದೇಶ ರದ್ದುಪಡಿಸುವಂತೆ ಕೋರಿ ನೈಜೀರಿಯಾ ಪ್ರಜೆ ನಾನ್ಸೋ ಜೋಚಿನ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ಈ ಕಾಯ್ದೆಯಡಿ ಬಂಧನ ಆದೇಶ ಹೊರಡಿಸಿದರೆ, ಆರೋಪಿಗೆ ಒಂದು ವರ್ಷ ಕಾಲ ಜಾಮೀನು ಲಭ್ಯವಾಗುವುದಿಲ್ಲ. ಒಂದು ವರ್ಷದವರೆಗೆ ಬಂಧನ ಆದೇಶ ಜಾರಿಯಲ್ಲಿರುತ್ತದೆ.

ಪ್ರಕರಣದ ಹಿನ್ನೆಲೆ:ಬಿಸಿನೆಸ್ ವೀಸಾ ಪಡೆದು ಭಾರತಕ್ಕೆ ಬಂದು ಬೆಂಗಳೂರಿನ ಹೊರಮಾವಿನಲ್ಲಿ ವಾಸವಿದ್ದ ನೈಜೀರಿಯಾ ಪ್ರಜೆ ನಾನ್ಸೋ ಜೋಚಿನ್ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳನ್ನು ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಸಿಸಿಬಿ ಮಾದಕ ದ್ರವ್ಯ ನಿಗ್ರಹ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ವರದಿ ಮೇರೆಗೆ ಆರೋಪಿಯನ್ನು ಬಂಧಿಸಲು ನಗರದ ಪೊಲೀಸ್ ಆಯುಕ್ತರು 2021ರ ಮೇ 3ರಂದು ಈ ಆದೇಶ ಹೊರಡಿಸಿದ್ದರು. ಅದರಂತೆ, ಆರೋಪಿಯನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.

ಈ ಬಂಧನ ಆದೇಶ ಕೈಬಿಡುವಂತೆ ಕೋರಿ ನಗರ ಪೊಲೀಸ್ ಆಯುಕ್ತರು ಮತ್ತು ಸರ್ಕಾರಕ್ಕೆ 2021ರ ಜೂ.1ರಂದು ಆರೋಪಿ ಮನವಿಪತ್ರ ಸಲ್ಲಿಸಿದ್ದ. ಅದನ್ನು ಜೂ.3ರಂದು ಪೊಲೀಸ್ ಆಯುಕ್ತರು ತಿರಸ್ಕರಿಸಿದ್ದರು. ಮತ್ತೊಂದೆಡೆ ಸರ್ಕಾರವು ಸಲಹ ಸಮಿತಿ ವರದಿ ಆಧರಿಸಿ ಬಂಧನ ಆದೇಶವನ್ನು ಡಿ.18ರಂದು ಅನುಮೋದಿಸಿತ್ತು. ಇದರಿಂದ ಹೈಕೋರ್ಟ್ ಮೆಟ್ಟಿಲೇರಿದ್ದ ಆರೋಪಿ, ತನ್ನ ಮನವಿ ಪತ್ರ ಪರಿಗಣಿಸುವಲ್ಲಿ ಸರ್ಕಾರ ವಿಳಂಬ ಮಾಡಿದೆ. ಇದರಿಂದ ಬಂಧನ ಆದೇಶ ರದ್ದುಪಡಿಸುವಂತೆ ಕೋರಿದ್ದ.

ವಿಚಾರಣೆ ವೇಳೆ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿ, ಅರ್ಜಿದಾರನ ಮನವಿ ಪತ್ರ ಪರಿಗಣಿಸಿ, ಸರ್ಕಾರ ನಿರ್ಣಯ ಕೈಗೊಂಡಿರುವುದರಲ್ಲಿ ಯಾವುದೇ ವಿಳಂಬವಾಗಿಲ್ಲ ಎಂದು ವಿವರಿಸಿದರು. ಸರ್ಕಾರದ ಪರ ವಕೀಲರ ವಾದ ಪುರಸ್ಕರಿಸಿದ ಪೀಠ, ಸರ್ಕಾರದ ಆದೇಶವು ಸೂಕ್ತವಾಗಿದೆ. ಅದರಲ್ಲಿ ಮಧ್ಯಪ್ರವೇಶ ಮಾಡಲು ಸಕಾರಣಗಳು ಇಲ್ಲ ಎಂದು ಹೇಳಿ ಅರ್ಜಿ ವಜಾಗೊಳಿಸಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ಮಾನವ ಕಳ್ಳಸಾಗಣೆ ಪತ್ತೆ: ಯುವತಿಯರನ್ನು ದುಬೈಗೆ ಕಳುಹಿಸುತ್ತಿದ್ದ ದಂಧೆ ಬಯಲು

ABOUT THE AUTHOR

...view details