ಬೆಂಗಳೂರು :ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಎಂಟನೇ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿ ಆದೇಶಿಸಿದೆ. ಜಾಮೀನು ಅರ್ಜಿ ತಿರಸ್ಕರಿಸಿದ್ದ ಎನ್‌ಐಎ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪ್ರಕರಣದ ಎಂಟನೇ ಆರೋಪಿ ಫರಾಜ್ ಪಾಷಾ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಜಿ. ಬಸವರಾಜ ಅವರಿದ್ದ ನ್ಯಾಯಪೀಠ ಮೇಲ್ಮನವಿಯನ್ನು ವಜಾಗೊಳಿಸಿ ಆದೇಶಿಸಿದೆ.
ಆರ್ಜಿದಾರರು (ಆರೋಪಿ) ಪ್ರಕರಣದಲ್ಲಿ ಭಯೋತ್ಪಾದಕ ಸಂಘಟನೆ ಸದಸ್ಯನಾಗಿದ್ದಾನೆಯೇ ಇಲ್ಲವೇ ಎಂಬುದರ ಕುರಿತು ಈ ಹಂತದಲ್ಲಿ ಪರಿಗಣಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಯುಎಪಿಎ ಕಾಯಿದೆಯಡಿ ಮಾಡಲಾದ ಆರೋಪಗಳು ನಿಸ್ಸಂದೇಹವಾಗಿ ರಾಷ್ಟ್ರದ ವಿರುದ್ಧದ ಅಪರಾಧಗಳಾಗಿದ್ದು, ದೇಶದ ಏಕತೆ, ಸಮಗ್ರತೆ, ಭದ್ರತೆ ಹಾಗೂ ಸಾರ್ವಭೌಮತೆಗೆ ಧಕ್ಕೆ ತರುತ್ತವೆ ಎಂದಿದೆ.
ಜೊತೆಗೆ, ಇದು ಸಮಾಜದ ವಿರುದ್ಧದ ಅಪರಾಧವೂ ಹೌದು. ಈ ಪ್ರಕರಣದ ವಾಸ್ತವಾಂಶಗಳು ವಿವರಿಸುವಂತೆ ಕೋಮುವಾದಿಗಳಂತೆ ಕಂಡುಬರುವ ಎಲ್ಲ ಆರೋಪಿಗಳಿಗೆ ಮೃತ ಹರ್ಷನ ಬಗ್ಗೆ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ. ಹಿಂದೂಗಳಲ್ಲಿ ಭಯ ಬಿತ್ತುವ ಉದ್ದೇಶದಿಂದ ಹತ್ಯೆಗೆ ಹರ್ಷನನ್ನು ಆಯ್ದುಕೊಳ್ಳಲಾಗಿದೆ. ಹೀಗಾಗಿ ಮೇಲ್ಮನವಿದಾರನ ವಯಸ್ಸು ಚಿಕ್ಕದು, ಅತನಿಗೆ ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂಬುದು ಆತನಿಗೆ ಜಾಮೀನು ನೀಡಲು ಪರಿಗಣಿಸಬೇಕಾದ ಆಧಾರವಲ್ಲ ಎಂದ ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.