ಕರ್ನಾಟಕ

karnataka

ETV Bharat / state

ಜನಪ್ರತಿನಿಧಿಗಳ ಪ್ರಮಾಣ ಅಸಿಂಧು ಕೋರಿದ್ದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್ - ವಿಧಾನಸಭೆ ಸ್ಪೀಕರ್‌

ನಿಗದಿತ ನಮೂನೆಯಲ್ಲಿ ಪ್ರಮಾಣ ಸ್ವೀಕರಿಸದ ಜನಪ್ರತಿನಿಧಿಗಳ ಪ್ರಮಾಣ ಅಸಿಂಧುಗೊಳಿಸುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್​ ತಿರಸ್ಕರಿಸಿದೆ.

ಹೈಕೋರ್ಟ್
ಹೈಕೋರ್ಟ್

By ETV Bharat Karnataka Team

Published : Dec 15, 2023, 9:42 PM IST

ಬೆಂಗಳೂರು:ಸಂವಿಧಾನದ ನಿಗದಿತ ನಮೂನೆಯಲ್ಲಿ ಪ್ರಮಾಣ ವಚನ ಸ್ವೀಕರಿಸದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿ.ಝಡ್‌ ಜಮೀರ್ ಅಹ್ಮದ್ ಖಾನ್ ಮತ್ತು ಕೆ.ಎನ್.ರಾಜಣ್ಣ ಸೇರಿದಂತೆ 9 ಸಚಿವರು ಹಾಗೂ 37 ಶಾಸಕರ ಪ್ರಮಾಣ ವಚನ ಸ್ವೀಕಾರವನ್ನು ಅಸಾಂವಿಧಾನಿಕವೆಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ.

ಬೆಳಗಾವಿ ಜಿಲ್ಲೆಯ ನಿವಾಸಿ ಭೀಮಪ್ಪ ಗಡಾದ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಹಾಕಿತು.

ಪ್ರಜಾಸತ್ತಾತ್ಮಕ ವ್ಯವಸ್ಥೆ, ಸಚಿವರು ಹಾಗೂ ಶಾಸಕರು ಮತದಾರರಿಂದ ಚುನಾಯಿತರಾಗಿದ್ದಾರೆ. ನಿಗದಿತ ನಮೂನೆ ಹೊರತಾಗಿ ಇತರೆ ಮಾದರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ತಾಂತ್ರಿಕ ಅಂಶವಷ್ಟೇ. ಕೆಲವೊಮ್ಮೆ ಉತ್ಸಾಹದಲ್ಲಿ ಯಾರನ್ನಾದರೂ ಹೆಸರಿಸಬಹುದು. ಅವರು ತಮ್ಮ ಕೆಲಸ ಕಾರ್ಯಗಳನ್ನು ಮಾಡಲಿ. ನಿಮಗೆ ಅಷ್ಟೊಂದು ಅತೃಪ್ತಿಯಿದ್ದರೆ ಮುಂಬರುವ ಚುನಾವಣೆಯಲ್ಲಿ ಅವರು ನಿಮ್ಮ ಪ್ರತಿನಿಧಿಗಳಲ್ಲ ಎಂಬುದನ್ನು ತೋರಿಸಿ ಎಂದು ಸಲಹೆ ನೀಡಿತು.

ಅಲ್ಲದೆ, ಚುನಾಯಿತ ಪ್ರತಿನಿಧಿಗಳಾಗಿ ಮತದಾರರ ನಿರೀಕ್ಷೆಯಂತೆ ಕೆಲಸ ಮಾಡದೆ ಹೋದರೆ ಆಗ ಅವರು ಆಯ್ಕೆಯಾಗದಂತೆ ನೀವು ನೋಡಿಕೊಳ್ಳಿ. ಮತ ಚಲಾಯಿಸುವಾಗ ನಿಮ್ಮ ಪ್ರಕಾರ ಯೋಗ್ಯವಾದ ಪ್ರತಿನಿಧಿಯನ್ನು ಆಯ್ಕೆ ಮಾಡುವ ಹಕ್ಕು ನಿಮಗಿದೆ ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿತು.

ವಿಚಾರಣೆ ವೇಳೆ, ಸಂವಿಧಾನದ ಪ್ರಕಾರ ಕೇವಲ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಬೇಕಿದೆ. ಆದರೆ, ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ 9 ಸಚಿವರು ಮತ್ತು 37 ಶಾಸಕರು, ಮತದಾರರು ಅಥವಾ ಇತರೆ ವ್ಯಕ್ತಿಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರಿಂದ ಅವರ ಪ್ರಮಾಣ ವಚನ ಸ್ವೀಕಾರವನ್ನು ಅಸಾಂವಿಧಾನಿಕವೆಂದು ಘೋಷಿಸಬೇಕು. ತಮ್ಮ ಕಚೇರಿ ಮತ್ತು ವಿಧಾನಸಭೆಗೆ ಹಾಜರಾದ ಪ್ರತಿ ದಿನಕ್ಕೆ ಸಂವಿಧಾನದ ಪರಿಚ್ಛೇದ 193ರ ಅಡಿಯಲ್ಲಿ (ದಿನಕ್ಕೆ 500 ರು.) ನಿಗದಿಪಡಿಸಿರುವ ದಂಡ ಪಾವತಿಸಲು ಅವರಿಗೆ ನಿರ್ದೇಶಿಸಬೇಕು.

ಸಂವಿಧಾನದ ಪರಿಚ್ಛೇದ 188 ಮತ್ತು ಶೆಡ್ಯೂಲ್‌-3ರಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ (ದೇವರ ಹೆಸರಿನಲ್ಲಿ) ಪುನಾ ಪ್ರಮಾಣ ವಚನ ಸ್ವೀಕರಿಸಲು ನಿರ್ದೇಶಿಸಬೇಕು. ಈ ಸಚಿವರು ಹಾಗೂ ಶಾಸಕರು ಅಸಮರ್ಪಕವಾಗಿ ಪ್ರಮಾಣ ವಚನ ಸ್ವೀಕರಿಸಿರುವ ಸಂಬಂಧ ವಿಚಾರಣೆ ನಡೆಸುವಂತೆ ವಿಧಾನಸಭೆ ಸ್ಪೀಕರ್‌ಗೆ ನಿರ್ದೇಶಿಸಬೇಕು ಎಂದು ಕೋರಿದರು. ಈ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ.

ಇದನ್ನೂ ಓದಿ:ಸಾಲ ವಸೂಲಾತಿ ನ್ಯಾಯಮಂಡಳಿಗೆ ಪಾಸ್‌ಪೋರ್ಟ್ ವಶಕ್ಕೆ ಪಡೆಯುವ ಅಧಿಕಾರವಿಲ್ಲ: ಹೈಕೋರ್ಟ್

ABOUT THE AUTHOR

...view details