ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದರೂ, ಅಪಘಾತಕ್ಕೆ ನಮ್ಮ ವಾಹನ ಕಾರಣವಲ್ಲ ಎಂಬುದಾಗಿ ಕೆಎಸ್‌ಆರ್‌ಟಿಸಿ ಮಂಡಿಸಿದ್ದ ವಾದವನ್ನು ಹೈಕೋರ್ಟ್ ತಳ್ಳಿಹಾಕಿದೆ.
ಮೃತರಿಗೆ ಪರಿಹಾರ ನೀಡುವಂತೆ ಸೂಚನೆ ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕೆಎಸ್‌ಆರ್‌ಟಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎನ್. ಎಸ್ ಸಂಜಯ್ ಗೌಡ ಅವರಿದ್ದ ನ್ಯಾಯಪೀಠ ಅರ್ಜಿ ವಜಾಗೊಳಿಸಿದೆ. ಅಲ್ಲದೇ, ಘಟನೆಯಲ್ಲಿ ಅಪಘಾತಕ್ಕೀಡಾದ ವ್ಯಕ್ತಿ ಮೃತಪಡುವುದಕ್ಕೂ ಮುನ್ನ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ ಎಂಬುದಾಗಿ ಹೇಳಿಕೆ ನೀಡಿದ್ದಾರೆ. ಇದೇ ಆಧಾರದಲ್ಲಿ ಪೊಲೀಸ್ ಸಿಬ್ಬಂದಿ ತನಿಖೆ ನಡೆಸಿದೆ.
ಅಲ್ಲದೇ, ನಿರ್ವಾಹಕ ಬಸ್‌ನ ಹಿಂಬದಿಯಲ್ಲಿ ಕುಳಿತಿದ್ದು, ಮುಂದೆ ಆಗುವ ಘಟನೆ ಬಗ್ಗೆ ಗಮನಿಸುವುದಕ್ಕೆ ಸಾಧ್ಯವಿಲ್ಲ. ಅಲ್ಲದೆ, ಪ್ರಕರಣದಿಂದ ರಕ್ಷಣೆ ಪಡೆಯಲು ಚಾಲಕ ಘಟನೆ ನಡೆದಿಲ್ಲ ಎಂಬುದಾಗಿ ಹೇಳುವ ಅವಕಾಶವಿದೆ. ಹೀಗಾಗಿ ಇಬ್ಬರ ಸಾಕ್ಷ್ಯಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂಬುದಾಗಿ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ:2011ರ ಮಾರ್ಚ್ 3ರಂದು ಬೆಳಗಿನ ಜಾವ 1.45ರ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದವರಿಗೆ ಬಸ್ ಡಿಕ್ಕಿ ಹೊಡೆದಿತ್ತು. ಘಟನೆಯಿಂದ ಮದ್ದೂರು ತಾಲೂಕಿನ ಶಿವಪುರ ಗ್ರಾಮದ ಆರ್.ರವಿ, ಎಸ್.ಆರ್.ರವಿ ಸಾವನ್ನಪ್ಪಿದ್ದರು. ಹರೀಶ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದರು. ಮೃತರ ಕುಟುಂಬಸ್ಥರು ಹಾಗೂ ಹರೀಶ್ ಅವರ ಸಂಬಂಧಿಕರು ಪರಿಹಾರ ಕೋರಿ ಒತ್ತಾಯಿಸಿದ್ದರು.