ಬೆಂಗಳೂರು:ಮಾನವರಿಂದ ಸಫಾಯಿ ಕರ್ಮಚಾರಿಗೆ ಕಾನೂನು ಬಾಹಿರವಾಗಿದ್ದರೂ, ರಾಜ್ಯದಲ್ಲಿ ಮಲಗುಂಡಿಗಳ ಸ್ವಚ್ಛತೆಗೆ ಕೆಳ ಸಮುದಾಯದವರನ್ನು ಬಳಕೆ ಮಾಡುತ್ತಿದ್ದು, ಈ ಪ್ರಕ್ರಿಯೆಗೆ ಜಾತಿ ತಾರತಮ್ಯ ಮಾಡುತ್ತಿರುವುದು ತೀವ್ರ ನೋವಿನ ಸಂಗತಿ ಎಂದು ಹೈಕೋರ್ಟ್ ತಿಳಿಸಿದೆ. ಅಲ್ಲದೆ, ಈ ಸಂಬಂಧ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ. ಬುಧವಾರ ನ್ಯಾಯಾಲಯದ ಕಲಾಪ ಆರಂಭವಾಗುತ್ತಿದ್ದಂತೆ ಈ ಸಂಬಂಧ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಯನ್ನು ಪ್ರಸ್ತಾಪಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ನ್ಯಾಯಪೀಠ, ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಅಮಿಕೈಸ್ ಕ್ಯೂರಿಯನ್ನಾಗಿ ವಕೀಲ ಶ್ರೀಧರ ಪ್ರಭು ಅವರನ್ನು ನೇಮಕ ಮಾಡಿ ಆದೇಶಿಸಿದೆ.
ವಿಚಾರಣೆ ವೇಳೆ ಕೆಲಕಾಲ ಗದ್ಗದಿತರಾದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ, ಕಳೆದ 60 ವರ್ಷಗಳಿಂದಲೂ ನಮ್ಮ ಸಹೋದರನಂತೆ ಜತೆಯಲ್ಲಿರುವ ವ್ಯಕ್ತಿಯ ದುರದೃಷ್ಟವಶಾತ್ ಕೆಳ ಜಾತಿಯಲ್ಲಿ ಜನಿಸಿದ್ದಾನೆ ಎಂಬ ಕಾರಣದಿಂದ ಈ ಕೆಲಸ ಮಾಡಬೇಕು ಎಂದು ಒತ್ತಾಯ ಮಾಡಲಾಗುತ್ತಿದೆ. ಈ ಬೆಳವಣಿಗೆ ಮನುಷ್ಯತ್ವಕ್ಕೆ ನಾಚಿಕೆಗೇಡಿನ ಸಂಗತಿಯಲ್ಲವೇ ಎಂದು ಪ್ರಶ್ನಿಸಿದರು.
ಅಲ್ಲದೆ, ಆರ್ಥಿಕವಾಗಿ ತೊಂದರೆಗೆ ಸಿಲುಕಿದ್ದಾನೆ ಎಂಬ ಕಾರಣದಿಂದ ಅವರನ್ನು ಪ್ರಾಣಿಗಳಿಗಿಂತಲೂ ಕೆಟ್ಟದಾಗಿ ನೋಡಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು?. ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಚಂದ್ರನ ಮೇಲೆ ಹೆಜ್ಜೆ ಇಡುವುದು ಹೆಮ್ಮೆಯ ವಿಚಾರವಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮ ಸಹೋದರನನ್ನು ಮನುಷ್ಯರಂತೆ ಪರಿಗಣಿಸುತ್ತಿಲ್ಲ. ಈ ಬೆಳವಣಿಗೆಯಿಂದ ತಂತ್ರಜ್ಞಾನದ ಅಭಿವೃದ್ಧಿ ವ್ಯರ್ಥವಾದಂತಲ್ಲವೇ ಎಂದು ಪೀಠ ತಿಳಿಸಿತು.