ಕರ್ನಾಟಕ

karnataka

ETV Bharat / state

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ವಕೀಲರ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪದ ಮೇಲೆ ವಕೀಲರೊಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣ ಮತ್ತು ವಿಚಾರಣೆ ರದ್ದು ಮಾಡಲು ಹೈಕೋರ್ಟ್ ನಿರಾಕರಿಸಿದೆ.

high-court-refuses-to-quash-harassment-case-against-lawyer
ವಕೀಲರ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಕಾರ

By

Published : Jul 12, 2023, 7:09 AM IST

ಬೆಂಗಳೂರು : ವಕೀಲಿಕೆಯ ಇಂಟರ್ನ್​ಶಿಪ್‌ಗೆ ಬಂದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಂಗಳೂರಿನ ವಕೀಲರೊಬ್ಬರ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಮತ್ತು ಅದರ ಕುರಿತು ಮಂಗಳೂರಿನ 3ನೇ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ನಡೆಯುತ್ತಿದ್ದ ವಿಚಾರಣೆ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿತು.

ತಮ್ಮ ವಿರುದ್ಧ ದಾಖಲಾಗಿದ್ದ ಆರೋಪ ಪಟ್ಟಿಯನ್ನು ರದ್ದುಪಡಿಸುವಂತೆ ಕೋರಿ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ದೂರುದಾರನ ಪ್ರಾಥಮಿಕ ಅಂಶಗಳು ಮತ್ತು ಸಂತ್ರಸ್ತೆಯ ಹೇಳಿಕೆಗಳನ್ನು ದಾಖಲಿಸಿ ಆರೋಪ ಪಟ್ಟಿ ರದ್ದುಪಡಿಸಲು ಒಪ್ಪಲಿಲ್ಲ.

ಅಲ್ಲದೆ, ಪ್ರಕರಣದಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸಿದಲ್ಲಿ ವಕೀಲರ ಕಚೇರಿಗೆ ಇಂಟರ್ನಿಯಾಗಿ ಪ್ರವೇಶಿಸಿದವರ ಮೇಲಿನ ಭಯಾನಕ ಕೃತ್ಯಗಳನ್ನು ನಿರಾಕರಿಸಿದಂತಾಗಲಿದೆ. ಇದು ವಕೀಲರ ವೃತ್ತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜೊತೆಗೆ, ಅರ್ಜಿದಾರರ ಕೆಟ್ಟ ನಡೆಯನ್ನು ಪ್ರಶಂಸೆ ಮಾಡಿದಂತಾಗಲಿದೆ. ಹೀಗಾಗಿ ಅರ್ಜಿದಾರರು ವಿಚಾರಣೆ ಎದುರಿಸಿ ಆರೋಪ ಮುಕ್ತರಾಗಿ ಹೊರಬರಬೇಕಾಗಿದೆ. ಈ ನಿಟ್ಟಿನಲ್ಲಿ ಅರ್ಜಿಯನ್ನು ತಿರಸ್ಕರಿಸುತ್ತಿರುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಆರೋಪಿಯು ಶಿಕ್ಷಕ ಮತ್ತು ನಂಬಿಕಸ್ಥನ ಸ್ಥಾನದಲ್ಲಿರುತ್ತಾರೆ. ಹೀಗಾಗಿ ಐಪಿಸಿ ಸೆಕ್ಷನ್ 376(2)(ಎಫ್)ರ ಆರೋಪಗಳಿದ್ದು, ಈ ಬಗ್ಗೆ ವಿಚಾರಣೆ ನಡೆಸಿ ಪರಿಶೀಲನೆ ನಡೆಸಬೇಕಾಗುತ್ತದೆ. ಘಟನೆಯ ಸಂಬಂಧ ಅರ್ಜಿದಾರರು ಒಪ್ಪಿಕೊಂಡಿದ್ದರೂ, ಅದೊಂದು ಪ್ರಯತ್ನವಾಗಿದೆ, ಆರೋಪಿಸಿದಂತೆ ಘಟನೆ ನಡೆದಿಲ್ಲ ಎಂದು ವಕೀಲರು ವಾದಿಸಿದ್ದಾರೆ. ಅಲ್ಲದೆ, ಪ್ರಕರಣ ಸಂಬಂಧ ಸಿಸಿಟಿವಿ ದೃಶ್ಯಗಳು ಸೇರಿದಂತೆ ಇತರೆ ಅಗತ್ಯ ಸಾಕ್ಷ್ಯಾಧಾರಗಳನ್ನು ಒದಗಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ವಜಾಗೊಳಿಸುತ್ತಿರುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ದೂರುದಾರರು 2ನೇ ವರ್ಷದ ಕಾನೂನು ವಿದ್ಯಾರ್ಥಿಯಾಗಿದ್ದು, ಅವರು ಅರ್ಜಿದಾರರ 2021ರ ಆಗಸ್ಟ್ ತಿಂಗಳಲ್ಲಿ ಇಂಟರ್ನ್​ಶಿಪ್​ಗಾಗಿ ಸೇರ್ಪಡೆಯಾಗಿದ್ದರು. ಅವರಿಗೆ ಮಾಸಿಕ ಆರು ಸಾವಿರ ರೂ.ಗಳ ಸ್ಟೇಫಂಡ್ ನೀಡಲಾಗುತ್ತಿತ್ತು. ಅರ್ಜಿದಾರರ ಆರೋಪಿಯು ಸಿಸಿ ಕ್ಯಾಮರಾದಲ್ಲಿ ಸಂತ್ರಸ್ತೆಯ ಚಲನವಲನ, ತಲೆ ಕೂದಲನ್ನು ಸರಿಪಡಿಸಿಕೊಳ್ಳುವುದು ಮತ್ತು ಖಾಸಗಿ ನಡವಳಿಕೆಗಳನ್ನು ವೀಕ್ಷಿಸಿ ವಿಡಿಯೋಗಳನ್ನು ವಾಟ್ಸ್​ಆ್ಯಪ್ ಮೂಲಕ ಆಕೆಗೆ ಕಳುಹಿಸುತ್ತಿದ್ದರು ಎಂಬ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು.

2021ರ ಸೆಪ್ಟೆಂಬರ್ 25ರಂದು ಯಾರೂ ಕಚೇರಿಯಲ್ಲಿ ಇಲ್ಲದ ಸಮಯದಲ್ಲಿ ಸಂಜೆ ಸುಮಾರು 6.40ರ ವೇಳೆಯಲ್ಲಿ ಯುವತಿಯ ಕೈ ಹಿಡಿದು ಎಳೆದು ಕ್ಯಾಬಿನ್‌ಗೆ ಬರುವಂತೆ ಒತ್ತಾಯಿಸಿದ್ದಾರೆ. ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದಾರೆ. ಇದರಿಂದ ಆಘಾತಗೊಂಡ ವಿದ್ಯಾರ್ಥಿನಿ ತಪ್ಪಿಸಿಕೊಂಡು ಕಚೇರಿಯಿಂದ ಹೊರ ಬಂದಿದ್ದು, ಕೂಗಾಡಿದ್ದರು. ಈ ವೇಳೆ ಘಟನೆ ಬಗ್ಗೆ ಹೊರಗಡೆ ಮಾಹಿತಿ ನೀಡಿದಲ್ಲಿ ಎಲ್ಲರೂ ನಿನ್ನ ಮೃತದೇಹ ನೋಡಬೇಕಾಗುತ್ತದೆ ಎಂದು ಆರೋಪಿಯು ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.

ಘಟನೆ ಸಂಬಂಧ ವಿದ್ಯಾರ್ಥಿನಿಯು ಕೆಲಸ ಕೊಡಿಸಿದ್ದ ವ್ಯಕ್ತಿ ಮತ್ತು ವಕೀಲರ ಪತ್ನಿಗೆ ಮಾಹಿತಿ ನೀಡಿದ್ದರು. ಇದಾದ ಬಳಿಕ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಐಪಿಸಿ ಸೆಕ್ಷನ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ABOUT THE AUTHOR

...view details