ಬೆಂಗಳೂರು:ಭದ್ರತೆಯಿರುವ ಉದ್ಯೋಗ ಮೌಲ್ಯಯುತವಾದ ಆಸ್ತಿಗೆ ಸಮಾನವಾದದ್ದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಸಲ್ಲಿಸುವಾಗ ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಮರೆಮಾಚಿದ ಆರೋಪ ಎದುರಿಸುತ್ತಿದ್ದ ವಕೀಲರ ವಿರುದ್ಧದ ಆರೋಪಪಟ್ಟಿ ರದ್ದುಪಡಿಸಲು ನಿರಾಕರಿಸಿದೆ.
ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತನ್ನ ವಿರುದ್ಧ ವಿಚಾರಣಾ ಹಂತದಲ್ಲಿದ್ದ ಕ್ರಿಮಿನಲ್/ ಸಿವಿಲ್ ಪ್ರಕರಣಗಳನ್ನು ಮರೆಮಾಚಿದ್ದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣ ಕುರಿತಂತೆ ಸಲ್ಲಿಕೆಯಾಗಿದ್ದ ಆರೋಪಪಟ್ಟಿಯನ್ನು ಪ್ರಶ್ನಿಸಿ ಸೋಮವಾರಪೇಟೆ ತಾಲೂಕಿನ ವಕೀಲ ಎಸ್.ಎಸ್. ಪಾಲಾಕ್ಷ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಮೋಸದಿಂದ ಯಾವುದೇ ಸ್ವತ್ತನ್ನು ತನ್ನಲ್ಲಿಟ್ಟುಕೊಳ್ಳುವುದು ವಂಚನೆಗೆ ಸಮ. ಇದು ಭಾರತೀಯ ದಂಡ ಸಂಹಿತೆ ಸೆಕ್ಷನ್ 415ರ ಪ್ರಕಾರ ಅಪರಾಧ. ಹೀಗಾಗಿ ಭದ್ರತೆಯಿರುವ ಉದ್ಯೋಗವೂ ಒಂದು ಮೌಲ್ಯಯುತ ಸ್ವತ್ತಾಗಿದೆ. ಇದನ್ನು ಪಡೆಯುವುದಕ್ಕಾಗಿ ಸುಳ್ಳು ಮಾಹಿತಿ ನೀಡುವುದು ವಂಚನೆ ಮಾಡಿದಂತೆ ಎಂದು ತಿಳಿಸಿದೆ.
ಅರ್ಜಿದಾರರು, ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕಣ್ತಪ್ಪಿನಿಂದ ತಪ್ಪಾಗಿದೆ ಎಂದು ಒಪ್ಪಿಕೊಳ್ಳಲಾಗುವುದಿಲ್ಲ. ಗ್ರೂಪ್ ಡಿ ನೌಕರಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಪ್ಪಾಗಿದೆ ಎಂದರೆ ಪರವಾಗಿಲ್ಲ. ಆದರೆ, ಸತತ 13 ವರ್ಷಗಳ ಕಾಲ ವಕೀಲ ವೃತ್ತಿಯನ್ನು ಮಾಡಿ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಈ ತಪ್ಪು ಆಗದಂತೆ ನೋಡಿಕೊಳ್ಳಬೇಕು. ನೇಮಕಾತಿ ಅಧಿಸೂಚನೆಯಲ್ಲಿ ಪ್ರಸ್ತುತ ಇರುವ ಹಾಗೂ ಹಿಂದೆ ಇದ್ದ ಪ್ರಕರಣಗಳ ಬಗ್ಗೆ ಸ್ಪಷ್ಟವಾಗಿ ಕೇಳಲಾಗಿದೆ. ಆದರೆ, ಅರ್ಜಿದಾರರು ನೇಮಕಾತಿ ಅರ್ಜಿ ಭರ್ತಿ ಮಾಡುವ ಸಂದರ್ಭದಲ್ಲಿ ಅದಕ್ಕೂ ಹಿಂದೆ ಇದ್ದ ಪ್ರಕರಣಗಳನ್ನು ಮರೆಮಾಚಿದಂತಿದೆ ಎಂದು ಅಭಿಪ್ರಾಯಪಟ್ಟಿದೆ. ಜೊತೆಗೆ, ಸುಪ್ರೀಂಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಈ ರೀತಿಯ ಪ್ರಕರಣದಲ್ಲಿ ಮಧ್ಯ ಪ್ರವೇಶಿಸುವುದಕ್ಕೆ ನಿರಾಕರಿಸಿ ಅರ್ಜಿ ವಜಾಗೊಳಿಸಿ ಪೀಠ ಆದೇಶಿಸಿದೆ.