ಬೆಂಗಳೂರು:ಹಡಗುಗಳ ಮೂಲಕ ವಿದೇಶಗಳಿಗೆ ಕಳುಹಿಸುವ ಸರಕುಗಳ ಕಂಟೇನರ್‌ಗಳಿಗೆ ಬಳಸುವ ದೋಷಪೂರಿತ ಟ್ಯಾಂಪರ್ ಪ್ರೂಫ್ ಎಲೆಕ್ಟ್ರಾನಿಕ್ ಸೀಲ್‌ಗಳನ್ನು (ಇ-ಸೀಲ್) ಪೂರೈಕೆ ಮಾಡದಿರುವ ಆರೋಪದಲ್ಲಿ ನಗರದ ಐಬಿ ಟ್ರ್ಯಾಕ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ತಮ್ಮ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿ ದಾಖಲಾಗಿದ್ದ ಪ್ರಕರಣ ಮತ್ತು ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಕೋರಿ ಐಬಿ - ಟ್ರ್ಯಾಕ್ ಸಲ್ಯೂಷನ್ಸ್ ಮತ್ತದರ ನಿರ್ದೇಶಕ ಸುದೇಂದ್ರ ಧಕನಿಕೋಟೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಅರ್ಜಿ ವಜಾಗೊಳಿಸಿದೆ.
ಅಲ್ಲದೆ, ವಾಣಿಜ್ಯ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುವ ಸಲುವಾಗಿ ಸಂಸ್ಥೆಯು ಇ - ಸೀಲ್‌ಗಳ ಟ್ಯಾಂಪರ್ ಅಲರ್ಟ್‌ಗಳನ್ನು ಗೌಪ್ಯವಾಗಿಡುವ ಮೂಲಕ ರಾಷ್ಟ್ರದ ಹಿತಾಸಕ್ತಿಯ ಜೊತೆ ರಾಜಿಯಾಗುವುದನ್ನು ಸಹಿಸಲಾಗದು. ಕಂಪನಿಯ ಈ ಲೋಪ ರಾಷ್ಟ್ರದ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಭದ್ರತೆ ಎನ್ನುವುದು ಆರ್ಥಿಕ, ರಕ್ಷಣಾ ಅಥವಾ ಮಾದಕದ್ರವ್ಯಗಳ ವಿಚಾರದಲ್ಲೂ ಅನ್ವಯವಾಗುತ್ತದೆ.
ಕಂಟೇನರ್‌ಗಳಲ್ಲಿ ಏನು ಸಾಗಣೆ ಮಾಡಲಾಗುತ್ತಿದೆ ಎಂಬುದನ್ನು ಪತ್ತೆಹಚ್ಚದಿದ್ದರೆ ಅದು ನಿಜಕ್ಕೂ ಯಾವುದೇ ದೇಶದ ಭದ್ರತೆಗೆ ಗಂಭೀರ ಅಪಾಯ ತಂದೊಡ್ಡಬಲ್ಲದು. ಯಾವುದೇ ರಾಷ್ಟ್ರದಲ್ಲಿ ವೈಯಕ್ತಿಕ ಹಿತಾಸಕ್ತಿಗಿಂತ ದೇಶದ ಭದ್ರತೆ ಮತ್ತು ಆರ್ಥಿಕ ಸುರಕ್ಷತೆಯೇ ಅಗ್ರ ಆದ್ಯತೆಯಾಗಿರುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.