ಬೆಂಗಳೂರು:ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿ, ಅದನ್ನು ಹಿಂಪಡೆಯಲು 5 ಕೋಟಿ ಬೇಡಿಕೆಯಿಟ್ಟ ಆರೋಪದಲ್ಲಿ ಸಿಲುಕಿರುವ ಆರೋಪಿಗಳ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮುಟ ತಾಲೂಕಿನ ಗೋಪಾಲ ಸದಾಶಿವ ಗಾಯತ್ರಿ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ನ್ಯಾಯಪೀಠ, ಆರೋಪಿಗಳನ್ನು ಪ್ರಕರಣದಿಂದ ಮುಕ್ತಗೊಳಿಸಲು ನಿರಾಕರಿಸಿದ್ದು, ಅರ್ಜಿಯನ್ನು ವಜಾಗೊಳಿಸಿದೆ.
ಅಲ್ಲದೆ, ಪ್ರಕರಣದ ಮೊದಲ ಆರೋಪಿ ವಕೀಲರಾಗಿದ್ದು, ಅಸ್ತ್ರ ಮತ್ತು ಗೋಕರ್ಣ ಹಿತರಕ್ಷಣಾ ಸಮಿತಿಯಿಂದ ಪಿಐಎಲ್ ಅರ್ಜಿ ಸಲ್ಲಿಸಿ ಅದನ್ನು ಹಿಂಪಡೆಯುವುದಕ್ಕಾಗಿ 10 ಲಕ್ಷ ರೂ.ಗಳನ್ನು ಸ್ವೀಕರಿಸುವ ಪ್ರಹಸನದ ವೇಳೆ ನಡೆದ ದಾಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಘಟನೆ ಸಂಬಂಧ ತನಿಖಾಧಿಕಾರಿಗಳು ದೂರವಾಣಿ ಸಂಭಾಷಣೆಯನ್ನು ಸಂಗ್ರಹಿಸಿದ್ದು, ಎಲ್ಲ ಆರೋಪಿಗಳು ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವವರೊಂದಿಗೆ ಸಂಪರ್ಕದಲ್ಲಿರುವುದು ತಿಳಿದು ಬಂದಿದೆ. ಜೊತೆಗೆ, ಆರೋಪಿಗಳ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿ ಅದನ್ನು ಹಿಂಪಡೆಯಲು 5 ಕೋಟಿ ರೂ.ಗಳ ಬೇಡಿಕೆಯಿಟ್ಟಿರುವ ಅಪರಾಧ ಕೃತ್ಯವನ್ನು ಹಗುರವಾಗಿ ಪರಿಗಣಿಸಲಾಗದು. ಹೀಗಾಗಿ ಆರೋಪಿಗಳ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ ನ್ಯಾಯಪೀಠ ಅರ್ಜಿಯನ್ನು ವಾಜಾಗೊಳಿಸಿ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ :ಅಸ್ತ್ರ ಮತ್ತು ಗೋಕರ್ಣ ಹಿತರಕ್ಷಣಾ ಸಮಿತಿ ಹೆಸರಿನಲ್ಲಿ ರಾಮಚಂದ್ರಪುರದ ರಾಘವೇಶ್ವರ ಮಠದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಹಿಂಪಡೆಯಲು 5 ಕೋಟಿ ಬೇಡಿಕೆಯಿಟ್ಟಿದ್ದರು. ಅರ್ಜಿದಾರರ ಪರ ವಕೀಲರೂ ಆದ ಪ್ರಕರಣದ ಮೊದಲ ಆರೋಪಿ ಮಲ್ಲಿಕಾರ್ಜುನ ಪಾಟೀಲ್ ಎಂಬುವವರು 2014ರ ಫೆಬ್ರವರಿ 26ರಂದು ಮಠದ ಮುಖ್ಯ ಆಡಳಿತಾಧಿಕಾರಿ ಕೃಷ್ಣ ಗಣೇಶ್ ಭಟ್ಗೆ ಕರೆ ಮಾಡಿ, ಮಠಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ 2014ರ ಮಾರ್ಚ್ 10ರಂದು ವಿಚಾರಣೆಗೆ ಬರಲಿದ್ದು ಈ ಕುರಿತು ಚರ್ಚೆ ಮಾಡಬೇಕು ಎಂದು ತಿಳಿಸಿದ್ದರು.
ಈ ಅಂಶವನ್ನು ಮಠದ ಕಾನೂನು ತೊಡಕುಗಳನ್ನು ನೋಡಿಕೊಳ್ಳುತ್ತಿದ್ದ ವಕೀಲರಾಗಿದ್ದ ಅರುಣ್ ಶ್ಯಾಮ್ ಅವರಿಗೆ ವಿವರಿಸಲಾಗಿತ್ತು. ಈ ಕುರಿತು ಅರುಣ್‌ಶ್ಯಾಮ್ ಅವರು ಮಲ್ಲಿಕಾರ್ಜಿನ ಪಾಟೀಲ್ ಅವರನ್ನು 2014ರ ಫೆಬ್ರವರಿ 27ರಂದು ಮಾಧ್ಯಮ ಕಚೇರಿಯಲ್ಲಿ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ 1 ಕೋಟಿ ರೂ.ಹಣ ನೀಡಿದಲ್ಲಿ ಪಿಐಎಲ್ ಹಿಂಪಡೆಯುವುದಾಗಿ ತಿಳಿಸಿದ್ದರು. ಇದೇ ಸಂಬಂಧ ಪದೇ ಪದೇ ಕರೆ ಮಾಡಿ ಬೇಡಿಕೆಯಿಡುತ್ತಿದ್ದರು.
ಇದಾದ ಬಳಿಕ 2014ರ ಮಾರ್ಚ್ 1 ರಂದು ದಾಖಲೆಗಳನ್ನು ತೋರಿಸಿ 5 ಕೋಟಿ ರೂ.ಗಳನ್ನು ನೀಡುವಂತೆ ಬೇಡಿಕೆಯಿಟ್ಟಿದ್ದರು. ಅದೇ ವರ್ಷ ಮಾರ್ಚ್ 10ರಂದು ಅರ್ಜಿ ವಿಚಾರಣೆ ಸಂದರ್ಭದಲ್ಲಿ ವಕೀಲ ಮಲ್ಲಿಕಾರ್ಜುನ ಅವರು ಎರಡನೇ ಆರೋಪಿ ಚಂದನ್ ಎಂಬುವರನ್ನು ಅರುಣ್ ಶ್ಯಾಮ್ ಅವರಿಗೆ ಪರಿಚಯ ಮಾಡಿಕೊಟ್ಟಿದ್ದರು. ಈ ವೇಳೆ ಅರ್ಜಿ ಹಿಂಪಡೆಯಲು ಗೋಕರ್ಣ ಹಿತರಕ್ಷಣಾ ಸಮಿತಿ ಮತ್ತು ಇತರೆ ಸಂಘಟನೆಗಳೆಲ್ಲಾ ಹಣಕ್ಕಾಗಿ ಬೇಡಿಕೆಯಿಟ್ಟಿರುವುದಾಗಿ ತಿಳಿಸಿದ್ದರು. ಅದೇ ಮಾರ್ಚ್ 17ರಂದು ಮಲ್ಲಿಕಾರ್ಜುನ ಪಾಟೀಲ್ ಅವರು ಅರುಣ್ ಶ್ಯಾಮ್ ಅವರನ್ನು ಕರೆದು ಮೋಹನ್ ಭಾಸ್ಕರ ಹೆಗಡೆ ಅವರನ್ನು ಪರಿಚಯ ಮಾಡಿಕೊಟ್ಟು ಹಣ ನೀಡಬೇಕು ಎಂದು ಸೂಚನೆ ನೀಡಿದ್ದರು.
ಈ ನಡುವೆ ಮಠದಿಂದ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪೊಲೀಸರು 10 ಲಕ್ಷ ರೂ.ಗಳ ಹಣ ಪಡೆಯುವ ಪ್ರಹಸನ ವೇಳೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಇದಾದ ಬಳಿಕ ತನಿಖೆ ನಡೆಸಿದ್ದ ಪೊಲೀಸರು ಪ್ರಕರಣದಲ್ಲಿ ಇತರೆ ಆರೋಪಿಗಳಾದ ಗೋಕರ್ಣ ಹಿತರಕ್ಷಣಾ ಸಮಿತಿಯ ಕಾರ್ಯನಿರ್ವಾಹಕ ಸದಸ್ಯರನ್ನು ಸೇರಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಈ ಸಂಬಂಧ ನಗರದ 32ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಇದನ್ನು ರದ್ದು ಪಡಿಸುವಂತೆ ಕೋರಿ ಹೈಕೊರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಿಂಪಡೆಯುವ ಸಂಬಂಧ ಪ್ರಕರಣದಲ್ಲಿ ಮೊದಲನೇ ಮತ್ತು ಎರಡನೇ ಆರೋಪಿಗಳು ಮಾತ್ರ ಭಾಗಿಯಾಗಿದ್ದಾರೆ. ಆದರೆ, ಅರ್ಜಿದಾರರು ಗೋಕರ್ಣ ಹಿತರಕ್ಷಣಾ ಸಮಿತಿಯ ಸದಸ್ಯರಾಗಿದ್ದು, ಅವರಿಗೂ ಈ ಕೃತ್ಯಕ್ಕೂ ಸಂಬಂಧವಿಲ್ಲ. ಇಬ್ಬರು ಸಾಕ್ಷಿದಾರರು ಅರ್ಜಿದಾರರ ವಿರುದ್ಧವಿದ್ದು, ಹೇಳಿಕೆಗಳನ್ನು ದಾಖಲಿಸಿದ್ದಾರೆ. ಅವರು ಹೇಳಿಕೆಯನ್ನು ಪರಿಗಣಿಸಬಾರದು. ಅಲ್ಲದೆ, ಅರ್ಜಿದಾರರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪಕ್ಷಗಾರರಲ್ಲ. ಹೀಗಾಗಿ ಅವರ ವಿರುದ್ಧದ ಪ್ರಕರಣವನ್ನು ರದ್ದು ಮಾಡಬೇಕು ಎಂದು ಕೋರಿದ್ದರು.
ಇದನ್ನೂ ಓದಿ:ಶಿಕ್ಷಕರ ನೇಮಕಾತಿ ಹಗರಣ: ಹೊಸದಾಗಿ ನೇಮಕಕ್ಕೆ ಸೂಚಿಸಿದ್ದ ಕೋಲ್ಕತ್ತಾ ಹೈಕೋರ್ಟ್ ಆದೇಶ ರದ್ದು ಮಾಡಿದ ಸುಪ್ರೀಂ