ಕರ್ನಾಟಕ

karnataka

By

Published : Oct 30, 2022, 6:59 AM IST

ETV Bharat / state

ಸ್ನಾತಕೋತ್ತರ ಕೋರ್ಸ್​​ ಸೀಟು ಹಂಚಿಕೆ, ಶುಲ್ಕ ನಿಗದಿಯಲ್ಲಿ ಮಧ್ಯಪ್ರವೇಶಿಸಲು ಹೈಕೋರ್ಟ್ ನಕಾರ

ಖಾಸಗಿ ಅಲ್ಪಸಂಖ್ಯಾತ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳಿಗೆ ಹಂಚಿಕೆ ಮಾಡಲಾಗಿರುವ ಸೀಟು​ ಹಂಚಿಕೆ ಮತ್ತು ಶುಲ್ಕ ನಿಗದಿ ವಿಚಾರ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ಮಧ್ಯಪ್ರವೇಶಕ್ಕೆ ನಿರಾಕರಿಸಿತು.

high-court-refuses-to-intervene-in-post-graduate-course-seat-allotment
ಸ್ನಾತಕೋತ್ತರ ಕೋರ್ಸ್​​ ಸೀಟು ಹಂಚಿಕೆ, ಶುಲ್ಕ ನಿಗದಿ ವಿಚಾರದಲ್ಲಿ ಮಧ್ಯಪ್ರವೇಶಿಸಲು ಹೈಕೋರ್ಟ್ ನಿರಾಕರಣೆ

ಬೆಂಗಳೂರು: ಖಾಸಗಿ ಅಲ್ಪಸಂಖ್ಯಾತರ ವೃತ್ತಿಪರ ಕಾಲೇಜುಗಳು ಸಂಘದೊಂದಿಗೆ ಮಾಡಿರುವ ಒಪ್ಪಂದದ ಆಧಾರದಲ್ಲಿ 2022-2023ನೇ ಸಾಲಿನ ಖಾಸಗಿ ಅಲ್ಪಸಂಖ್ಯಾತ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳಿಗೆ ಹಂಚಿಕೆ ಮಾಡಲಾಗಿರುವ ಸೀಟ್ ಹಂಚಿಕೆ ಮತ್ತು ಶುಲ್ಕ ನಿಗದಿ ವಿಚಾರ ಸಂಬಂಧ ಮಧ್ಯಪ್ರವೇಶಿಸಲು ಹೈಕೋರ್ಟ್ ನಿರಾಕರಿಸಿದೆ.

ಖಾಸಗಿ ಅಲ್ಪಸಂಖ್ಯಾತರ ವೃತ್ತಿಪರ ಕಾಲೇಜುಗಳು ಸಂಘದ ಸದಸ್ಯರಾಗಿರುವ ಅರ್ಜಿದಾರ ಕಾಲೇಜುಗಳು ಅನಿವಾಸಿ ಭಾರತೀಯರು(ಎನ್‌ಆರ್‌ಐ) ಮತ್ತು ಮ್ಯಾನೇಜ್‌ಮೆಂಟ್ ಕೋಟಾದಲ್ಲಿ ಸೀಟುಗಳ ಹಂಚಿಕೆಗೆ ಸಂಬಂಧಿಸಿದಂತೆ ವ್ಯತ್ಯಾಸಗಳಿವೆ. ಆದ್ದರಿಂದ ಸೀಟು ಹಂಚಿಕೆ ಮತ್ತು ಶುಲ್ಕವನ್ನು ಮರು ನಿಗದಿ ಮಾಡುವುದಕ್ಕೆ ಸೂಚನೆ ನೀಡಬೇಕು ಎಂದು ಕೋರಿ ನಗರದ ವೈದೇಹಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಅಂಡ್ ರಿಸರ್ಚ್ ಸೆಂಟರ್ ಮತ್ತು ಇತರೆ ಎರಡು ಮೆಡಿಕಲ್ ಕಾಲೇಜುಗಳು ಅರ್ಜಿ ಸಲ್ಲಿಸಿದ್ದವು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಆಲೋಕ್ ಆರಾಧೆ ಮತ್ತು ನ್ಯಾ.ವಿಶ್ವಜಿತ್ ಶೆಟ್ಟಿ ಅವರನ್ನೊಳಗೊಂಡ ವಿಭಾಗೀಯಪೀಠ, ಶುಲ್ಕ ನಿಗದಿ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದು, ಅರ್ಜಿಯನ್ನು ಇತ್ಯರ್ಥಪಡಿಸಿದೆ.

ಆದೇಶದಲ್ಲೇನಿದೆ?:ಅರ್ಜಿದಾರ ಕಾಲೇಜುಗಳು ಶುಲ್ಕ ನಿಗದಿ ಮತ್ತು ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಘದ ಒಮ್ಮತದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಕುರಿತ ಕಾನೂನು ಬದ್ಧತೆಯನ್ನು ಸಂಘದ ಯಾವುದೇ ಸದಸ್ಯರು ಪ್ರಶ್ನಿಸಿಲ್ಲ. ಹೀಗಿರುವಾಗ ಸಹಿ ಹಾಕಿರುವುದಕ್ಕೆ ಬದ್ಧರಾಗಿದ್ದಾರೆ ಎಂಬ ಅಭಿಪ್ರಾಯ ಬರಲಿದೆ.

ಅಲ್ಲದೆ, ಕಳೆದ ಹಲವು ವರ್ಷಗಳಿಂದ ಒಮ್ಮತ್ತದ ಸೀಟು ಹಂಚಿಕೆ ನಿಯಮಗಳನ್ನು ಮುಂದುವರೆಸುತ್ತಿದ್ದಾರೆ. ಆದರೆ, ಪ್ರಸಕ್ತ ವರ್ಷ ಸಂಘದ ಇತರೆ ಕಾಲೇಜುಗಳು(ಅರ್ಜಿದಾರರರನ್ನು ಹೊರತುಪಡಿಸಿ) ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಎನ್‌ಆರ್‌ಐ ಮತ್ತು ಮ್ಯಾನೇಜ್‌ಮೆಂಟ್ ಕೋಟಾ ಸೀಟು ಪಡೆದಿವೆ ಎಂದಾದಲ್ಲಿ ತಾರತಮ್ಯವಿದೆ ಎಂದು ಪರಿಗಣಿಸಲಾಗದು ಎಂದು ನ್ಯಾಯಪೀಠ ತಿಳಿಸಿದೆ.

ಸೀಟು ಹಂಚಿಕೆ ರೊಟೇಷನ್ ಆಧಾರದಲ್ಲಿ ನಡೆಯುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಪ್ರತಿ ವರ್ಷವೂ ವಿವಿಧ ವರ್ಗಗಳಲ್ಲಿ ಸೀಟು ಹಂಚಿಕೆ ಬದಲಾವಣೆಯಾಗುತ್ತದೆ. ಅಲ್ಲದೆ, ಈ ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿ ಅರ್ಜಿದಾರರ ಕಾಲೇಜುಗಳೂ ಹೆಚ್ಚಿನ ಸಂಖ್ಯೆ ಸೀಟುಗಳನ್ನು ಪಡೆದುಕೊಂಡಿವೆ. ಹೀಗಾಗಿ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗಿದೆ ಎಂಬುದಾಗಿ ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಅದೇಶದಲ್ಲಿ ತಿಳಿಸಿರುವ ನ್ಯಾಯಪೀಠ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ಇದನ್ನೂ ಓದಿ:ಐಪಿಸಿ ಸೆಕ್ಷನ್ 279 - ನಿರ್ಲಕ್ಷ್ಯದ ಚಾಲನೆ ಸಾಕು ಪ್ರಾಣಿಗಳಿಗೆ ಅನ್ವಯವಾಗುವುದಿಲ್ಲ: ಹೈಕೋರ್ಟ್

ABOUT THE AUTHOR

...view details