ಕರ್ನಾಟಕ

karnataka

ETV Bharat / state

ಬನ್ನಂಜೆ ರಾಜನ ಸಹಚರ ಶಶಿಕುಮಾರ್​ಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಣೆ - ಈಟಿವಿ ಭಾರತ ಕನ್ನಡ ನ್ಯೂಸ್

2019ರಲ್ಲಿ ಉಡುಪಿ ಮೂಲದ ಉದ್ಯಮಿಯ ಪುತ್ರನನ್ನು ಅಪಹರಿಸಿ ಹಣ ನೀಡುವಂತೆ ಬೆದರಿಕೆ ಒಡ್ಡಿದ್ದ ಪ್ರಕರಣ ಸಂಬಂಧ ಭೂಗತ ಪಾತಕಿ ಬನ್ನಂಜೆ ರಾಜನ ಸಹಚರ ಶಶಿಕುಮಾರ್ ಅಲಿಯಾಸ್ ಶಶಿ ಪೂಜಾರಿಗೆ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ.

high-court-refuses-to-grant-bail-to-sashikumar
ಬನ್ನಂಜೆ ರಾಜನ ಸಹಚರ ಶಶಿಕುಮಾರ್​ಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಣೆ

By

Published : Nov 16, 2022, 9:30 PM IST

ಬೆಂಗಳೂರು : ಉಡುಪಿ ಮೂಲದ ಉದ್ಯಮಿಯ ಪುತ್ರನನ್ನು ಅಪಹರಿಸಿ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ 2019ರಲ್ಲಿ ಬೆದರಿಕೆ ಹಾಕಿದ್ದ ಪ್ರಕರಣದ ಸಂಬಂಧ ಭೂಗತ ಪಾತಕಿ ಬನ್ನಂಜೆ ರಾಜನ ಸಹಚರ ಶಶಿಕುಮಾರ್ ಅಲಿಯಾಸ್ ಶಶಿ ಪೂಜಾರಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.

ಶಶಿಪೂಜಾರಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ಕ್ರೈಮ್ ಸಿಂಡಿಕೇಟ್‌ಗಾಗಿ ವೈಯಕ್ತಿಕವಾಗಿ ಕಾರ್ಯನಿರ್ವಹಿಸುವ ಆರೋಪಿಯ ವಿರುದ್ಧವೂ ಸಹ ಕರ್ನಾಟಕ ಅಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ (ಕೋಕಾ) ಅನ್ವಯವಾಗಲಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಆರೋಪಿ ಬಿಡುಗಡೆ ಮಾಡಿದಲ್ಲಿ ಆತನಿಂದ ಸಮಾಜಕ್ಕೆ ಅಪಾಯವಿದೆ. ಅಂತಹ ಆರೋಪಿಯನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಈ ನಿಟ್ಟಿನಲ್ಲಿ ಜಾಮೀನು ತಿರಸ್ಕರಿಸುತ್ತಿರುವುದಾಗಿ ನ್ಯಾಯಪೀಠ ತಿಳಿಸಿದೆ. ಆರೋಪಿ ತನಗೂ ಕೃತ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾನೆ. ಆದರೆ ಅರ್ಜಿದಾರರ ಸಹೋದರ ಮತ್ತು ಈ ಪ್ರಕರಣದ ಪ್ರಮುಖ ಆರೋಪಿ ರವಿಚಂದ್ರ ಪೂಜಾರಿ ಜೈಲಿನಲ್ಲಿದ್ದುಕೊಂಡೇ ಅರ್ಜಿದಾರರ ಹೆಸರಿನಲ್ಲಿ ಸಿಮ್‌ಕಾರ್ಡ್ ಪಡೆದಿರುವುದಾಗಿ ಹೇಳಿದೆ.

ಆರೋಪ ಪಟ್ಟಿಯಲ್ಲಿನ ಹಲವು ಅಂಶಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಅರ್ಜಿದಾರರು ಹಲವು ಬಾರಿ ಬನ್ನಂಜೆ ರಾಜನನ್ನು ಭೇಟಿಯಾಗಿದ್ದಾನೆಂಬುದು ತನಿಖೆ ವೇಳೆ ಪತ್ತೆಯಾಗಿದೆ. ಹಾಗಾಗಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಆದೇಶಿಸಿದೆ. ಆರೋಪಿಯು ಅಪರಾಧ ಸಿಂಡಿಕೇಟ್‌ಗಾಗಿ ವೈಯಕ್ತಿಕವಾಗಿ ಕಾರ್ಯನಿರ್ವಹಿಸಿದ್ದರೂ ಸಹ, ಕರ್ನಾಟಕ ಸಂಘಟಿತ ಅಪರಾಧಗಳ ಕರ್ನಾಟಕ ನಿಯಂತ್ರಣ ಕಾಯ್ದೆ (ಕೆಸಿಒಸಿಎ) 200ರ ಅಡಿ ಅಪರಾಧಗಳಿಗೆ ಶಿಕ್ಷೆಗೆ ಗುರಿಯಾಗಬಹುದು ಎಂದು ದರೋಡೆಕೋರರ ಆಪಾದಿತ ಸಹಚರನಿಗೆ ಜಾಮೀನು ನೀಡಲು ನಿರಾಕರಿಸುವ ವೇಳೆ ಹೇಳಿದೆ.

ಕೋಕಾ ಕಾಯಿದೆಯಡಿ ಸಂಘಟಿತ ಅಪರಾಧ ಸಿಂಡಿಕೇಟ್ ಎಂಬುದರ ವ್ಯಾಖ್ಯಾನ ಎಲ್ಲರೂ ಒಗ್ಗೂಡಿ ಅಪರಾಧ ಕೃತ್ಯ ನಡೆಸುವುದು ಮತ್ತು ವೈಯಕ್ತಿಕವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿ ಆಗುವುದು ಎರಡೂ ಸೇರಿದೆ. ಆದ್ದರಿಂದ ಅಪರಾಧ ಸಿಂಡಿಕೇಟ್ ಭಾಗವಾಗಿ ಆರೋಪಿ ಕೆಲವು ಕೃತ್ಯಗಳನ್ನು ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಕೋಕಾ ಕಾಯಿದೆ ಅನ್ವಯವಾಗಲಿದೆ. ಹಾಗಾಗಿ ವಿಚಾರಣೆ ಎದುರಿಸಲೇಬೇಕು ಎಂದು ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ : ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ 2019ರ ಮಾರ್ಚ್‌ನಲ್ಲಿ ಉದ್ಯಮಿಯ ಪುತ್ರನ ಅಪಹರಣ ಮತ್ತು ಕೊಲೆ ಬೆದರಿಕೆ ಪ್ರಕರಣ ದಾಖಲಾಗಿತ್ತು. ಹಣ ನೀಡದಿದ್ದರೆ ಕೊಲ್ಲಲಾಗುವುದು ಎಂದು ಅಪಹರಣಕಾರರು ತುಳು ಭಾಷೆಯಲ್ಲಿ ಬೆದರಿಕೆಯೊಡ್ಡಿದ್ದರು ಎಂದು ಆರೋಪಿಸಲಾಗಿತ್ತು.

ನಂತರ ಪ್ರಕರಣವನ್ನು ಉಡುಪಿ ಠಾಣೆಗೆ ವರ್ಗಾಯಿಸಲಾಗಿತ್ತು. ಈ ಬಗ್ಗೆ ಶಶಿ ಪೂಜಾರಿಯನ್ನು 2019ರ ಮಾ.21ರಂದು ಬಂಧಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. ಅದರಲ್ಲಿ ಅರ್ಜಿದಾರರರನ್ನು ಎರಡನೇ ಆರೋಪಿ ಮತ್ತು ಬನ್ನಂಜೆ ರಾಜನನ್ನು ಮೊದಲನೇ ಆರೋಪಿಯನ್ನಾಗಿ ಮಾಡಲಾಗಿತ್ತು. ನ್ಯಾಯಾಂಗ ಬಂಧನಲ್ಲಿರುವ ಶಶಿ ಪೂಜಾರಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ :ಭೂಗತ ಪಾತಕಿ ಬನ್ನಂಜೆ ರಾಜ ಆಪ್ತ ಮನೀಶ್ ಶೆಟ್ಟಿ​ ಗುಂಡೇಟಿಗೆ ಬಲಿ...!

ABOUT THE AUTHOR

...view details