ಬೆಂಗಳೂರು:ಉಡುಪಿ ಜಿಲ್ಲೆ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಆಡಳಿತ ಮಂಡಳಿ ಸದಸ್ಯರು ಸಂಪೂರ್ಣ ಅಧಿಕಾರಾವಧಿ ಅನುಭವಿಸಿದ್ದಾರೆ. ಆದ್ರೆ, ಕೊನೆಯ ಘಳಿಗೆಯಲ್ಲಿ ಸಮಿತಿ ಅವಧಿ ವಿಸ್ತರಿಸುವಂತೆ ಮಾಡಿರುವ ಮನವಿಯನ್ನು ಅನುಮತಿಸಲಾಗುವುದಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಈ ಸಂಬಂಧ ಸಮಿತಿಯ ಆರು ಮಂದಿ ಸದಸ್ಯರು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿ ಆದೇಶ ಹೊರಡಿಸಿದೆ.
ದೇವಾಲಯದ ಆಡಳಿತ ಮಂಡಳಿ ಅವಧಿಯನ್ನು ವಿಸ್ತರಿಸುವಂತೆ ಕೋರಿ ಸಮಿತಿ ಸದಸ್ಯರಾದ ಕೆರಾಡಿ ಚಂದ್ರಶೇಖರ ಶೆಟ್ಟಿ ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯ ಪೀಠ ನಡೆಸಿದ ನಂತರ, ಈ ಅರ್ಜಿಯನ್ನು ತಿರಸ್ಕರಿಸಿದೆ.
ಅಲ್ಲದೆ, ಸಮಿತಿಯನ್ನು ರಚನೆ ಮಾಡಿದ್ದ ಸಂದರ್ಭದಲ್ಲಿ ಅರ್ಜಿದಾರರು ಮೂರು ವರ್ಷಗಳ ಅವಧಿಯನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ, ಅಧಿಕಾರವನ್ನೂ ಅನುಭವಿಸಿದ್ದಾರೆ. ಅವಧಿಯ ಮುಗಿಯುವ ಕೊನೆಗೊಳ್ಳುವ ಸಂದರ್ಭದಲ್ಲಿ ಸಮಿತಿಯ ಕಾಲಾವಧಿ ವಿಸ್ತರಿಸಲು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.
ಸಮಿತಿ ರಚನೆ ಮಾಡಿ ಆದೇಶದ ದಿನದಿಂದ ಬದಲಿಗೆ, ಸಮಿತಿ ಮೊದಲ ಸಭೆ ನಡೆಸಿದ ದಿನದಿಂದ ಮೂರು ವರ್ಷಗಳ ಅವಧಿಗೆ ಇರಬೇಕು ಎಂದು ಕೋರಿದ್ದಾರೆ. ಈ ರೀತಿಯಲ್ಲಿ ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಿದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಕಾಯಿದೆಗೆ ವಿರುದ್ಧವಾಗಲಿದೆ. ಆದ್ದರಿಂದ ಸಮಿತಿ ರಚನೆ ಮಾಡಿ ಆದೇಶ ಮಾಡಿದ ದಿನದಿಂದ ಅವಧಿ ಪ್ರಾರಂಭವಾಗಿದ್ದು, ಮೂರು ವರ್ಷಗಳಿಗೆ ಅಂತ್ಯಗೊಳ್ಳಲಿದೆ ಎಂದು ಕಾಯಿದೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಪೀಠ ತಿಳಿಸಿದೆ.
ಅಷ್ಟೇ ಅಲ್ಲದೆ, ಸಮಿತಿಯ ಸದಸ್ಯರು ಸಭೆ ಕರೆಯುವುದು ಎಂದು ಕಾಯಿದೆಯಲ್ಲಿ ತಿಳಿಸಲಾಗಿದೆ. ಆದರೆ, ಇದನ್ನು ಸಮಿತಿಯ ಅಧ್ಯಕ್ಷರನ್ನು ಆಯ್ಕೆ ಮಾಡಿದ ದಿನದಿಂದ ಸಮಿತಿ ಅವಧಿ ಪ್ರಾರಂಭವಾಗಲಿದೆ ಎಂದು ಅರ್ಥೈಸಲಾಗುವುದಿಲ್ಲ. ಸಮಿತಿ ರಚಿಸಿದ ಪ್ರಾರಂಭದ ದಿನದಿಂದಲೂ ಅವರು ಸದಸ್ಯರಾಗಿ ಅಧಿಕಾರ ಪಡೆದುಕೊಂಡಿರುತ್ತಾರೆ. ಹೀಗಾಗಿ ಅರ್ಜಿದಾರರ ವಾದವನ್ನು ಒಪ್ಪಿಕೊಂಡಲ್ಲಿ ಅದು ಕಾನೂನಿಗೆ ವಿರುದ್ಧವಾಗಿರಲಿದೆ ಎಂದು ನ್ಯಾಯ ಪೀಠ ತಿಳಿಸಿದೆ.