ಬೆಂಗಳೂರು: ಪತ್ನಿ ಕೊಲೆ ಮಾಡಿದ್ದ ಅಪರಾಧಿಯೊಬ್ಬರ ಜೀವಾವಧಿ ಶಿಕ್ಷೆಯನ್ನು ಏಳು ವರ್ಷಗಳ ಕಠಿಣ ಶಿಕ್ಷೆಗೆ ಮಾರ್ಪಾಡು ಮಾಡಿ ಹೈಕೋರ್ಟ್ ಆದೇಶಿಸಿದೆ. ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ್ದ ಕ್ರಮವನ್ನು ಪ್ರಶ್ನಿಸಿ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ಬೆಳವೆಂಗಲ ಹೋಬಳಿಯ ಬೊಮ್ಮನಹಳ್ಳಿಯ ರಾಜೇಶ್ (39) ಎಂಬುವರು ಹೈಕೋರ್ಟ್ನಲ್ಲಿ ಕ್ರಿಮಿನಲ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ಕೆ.ಎಸ್.ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಅಪರಾಧಿ ತನ್ನ ಹೆಣ್ಣು ಮಕ್ಕಳ ಹೆಸರಿಗೆ 3 ಲಕ್ಷ ರೂ.ಗಳ ಮೊತ್ತವನ್ನು ಠೇವಣಿಯಾಗಿ ಇರಿಸಬೇಕು ಎಂದು ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಆರೋಪಿಯ ಪತ್ನಿ ಮತ್ತೊಬ್ಬರೊಂದಿಗೆ ಇದ್ದುದ್ದನ್ನು ನೋಡಿದ್ದರು. ಇದರಿಂದ ಹಠಾತ್ ಪ್ರಚೋದನೆಯಿಂದ ಸ್ವಯಂ ನಿಯಂತ್ರಣ ಹಾಗೂ ಮಾನಸಿಕ ಸಮತೋಲನ ಕಳೆದುಕೊಂಡು ಈ ಹತ್ಯೆ ನಡೆಸಿದ್ದಾರೆ. ಜೊತೆಗೆ, ಘಟನಾ ಸ್ಥಳಕ್ಕೆ ನಿರಾಯುಧನಾಗಿ ಹೋಗಿದ್ದ. ಹೆಂಡತಿಯನ್ನು ಕೊಲೆ ಮಾಡುವ ಯಾವುದೇ ಉದ್ದೇಶ ಹೊಂದಿರಲಿಲ್ಲ. ಹೀಗಾಗಿ, ಇದನ್ನು ಕೊಲೆಯೆಂದು ಪರಿಗಣಿಸಲು ಸಾಧ್ಯವಿಲ್ಲ. ಆದ್ದರಿಂದ ಶಿಕ್ಷೆ ರದ್ದು ಮಾಡಬೇಕು ಎಂದು ಕೋರಿದ್ದರು. ವಾದವನ್ನು ಪರಿಗಣಿಸಿದ ನ್ಯಾಯಪೀಠ, ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು ?ದೊಡ್ಡಬಳ್ಳಾಪುರದ ತಾಲೂಕಿನ ದೊಡ್ಡಬೆಳವೆಂಗಲ ಹೋಬಳಿಯ ಬೊಮ್ಮನಹಳ್ಳಿ ನಿವಾಸಿ ರಾಜೇಶ್ ಎಂಬುವರು ಇದೇ ತಾಲೂಕಿನ ತಪಸೀಹಳ್ಳಿಯ ಮಹಿಳೆಯ ಜೊತೆ 2010ರ ಅಕ್ಟೋಬರ್ 22ರಂದು ವಿವಾಹವಾಗಿದ್ದರು. ನಂತರ ಉಂಟಾದ ವ್ಯಾಜ್ಯದಲ್ಲಿ ರಾಜೇಶ್ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಕಲಂ 498ಎ ಅನುಸಾರ ಪ್ರಕರಣ ದಾಖಲಿಸಲಾಗಿತ್ತು. ಜೀವನ ನಿರ್ವಹಣೆಗಾಗಿ ಪತ್ನಿ ಸಲ್ಲಿಸಿದ್ದ ಅರ್ಜಿಗೆ ಅನುಗುಣವಾಗಿ ನ್ಯಾಯಾಲಯ ಪ್ರತಿ ತಿಂಗಳೂ 2 ಸಾವಿರ ರೂ.ಗಳ ಪರಿಹಾರ ನೀಡುವಂತೆ ರಾಜೇಶ್ಗೆ ಆದೇಶಿಸಿತ್ತು.