ಬೆಂಗಳೂರು : ಸರ್ಕಾರಿ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಹಣಕಾಸು ದುರ್ಬಳಕೆ ಮಾಡಿದ್ದ ಆರೋಪದಲ್ಲಿ ಒಂದು ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿದ್ದ 80 ವರ್ಷದ ವೃದ್ಧನ ಶಿಕ್ಷೆಯನ್ನು ಒಂದು ದಿನಕ್ಕೆ (ನ್ಯಾಯಾಲಯದ ಕಲಾಪ ಮುಗಿಯುವವರೆಗೆ ಮಾತ್ರ) ಇಳಿಕೆ ಮಾಡಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಅಲ್ಲದೇ, ಅರ್ಜಿದಾರರ ವಿರುದ್ಧ ದಾಖಲಾಗಿದ್ದ ಎರಡು ಆರೋಪಗಳಿಗೆ ತಲಾ 10 ಸಾವಿರ ರೂಗಳಂತೆ ದಂಡ ಪಾವತಿಸುವಂತೆ ಆದೇಶಿಸಿದೆ. ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಒಂದು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಶ್ನಿಸಿ ಮೈಸೂರು ಜಿಲ್ಲೆ ಕೆ ಆರ್ ನಗರದ ಹನುಮಂತರಾವ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ, ವಿಚಾರಣಾ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಎತ್ತಿ ಹಿಡಿದಿದೆ. ಆದರೆ, ಅರ್ಜಿದಾರರಿಗೆ 80 ವರ್ಷ ವಯಸ್ಸಾಗಿದ್ದು, ದುರ್ಬಳಕೆ ಮಾಡಿಕೊಂಡಿರುವ ಮೊತ್ತವನ್ನು ಈಗಾಗಲೇ ಸರ್ಕಾರ ಹಿಂಪಡೆದಿದೆ. ಹೀಗಾಗಿ ದಂಡ ವಿಧಿಸಿ ಶಿಕ್ಷೆಯ ಪ್ರಮಾಣ ಕಡಿಮೆ ಮಾಡಿರುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು ? : ಅರ್ಜಿದಾರ ಹನುಮಂತ ರಾವ್ ವಿರುದ್ಧ 1981ರ ನವೆಂಬರ್ 21 ರಿಂದ 1987ರ ಜನವರಿ 5ರ ವರೆಗಿನ ಅವಧಿಯಲ್ಲಿ ವಿಧವಾ ವೇತನ ಮಂಜೂರು ಮಾಡುವಲ್ಲಿ 54,299 ರೂ ಗಳ ಅವ್ಯವಹಾರ ಎಸಗಿದ ಆರೋಪ ಎದುರಾಗಿತ್ತು. ಈ ಸಂಬಂಧ ನಡೆದ ಲೆಕ್ಕಪರಿಶೋಧನೆ ವೇಳೆ ಅರ್ಜಿದಾರರು ತಪ್ಪು ಎಸಗಿರುವುದು ಕಂಡು ಬಂದಿರುತ್ತದೆ. ಇದಕ್ಕಾಗಿ ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಿ ದುರ್ಬಳಕೆ ಮಾಡಿಕೊಂಡಿರುವ ಹಣವನ್ನು 1987 ರ ಜನವರಿ 31ರ ಅಂತ್ಯದ ವೇಳೆಗೆ ಹಿಂದಿರುಗಿಸುವಂತೆ ಸೂಚನೆ ನೀಡಿರುತ್ತಾರೆ. ಅಲ್ಲದೆ, ಈ ಮೊತ್ತವನ್ನು ಅರ್ಜಿದಾರರ ವೇತನದಿಂದ ಹಿಂಪಡೆದುಕೊಂಡಿರುತ್ತಾರೆ.
ಈ ನಡುವೆ ಮಂಡ್ಯ ಜಿಲ್ಲಾ ಖಜಾನೆ ಅಧಿಕಾರಿಯಾಗಿದ್ದ ಸಿ ಎಸ್ ಮುತ್ತಣ್ಣ ಎಂಬುವರು ಭಾರತೀಯ ದಂಡ ಸಂಹಿತೆ 409 (ಸರ್ಕಾರಿ ನೌಕರನ ಮೇಲಿನ ನಂಬಿಕೆ ಉಲ್ಲಂಘನೆ), 477 ಎ(ಸುಳ್ಳು ಲೆಕ್ಕ ಬರೆಯುವುದು) ಅಡಿ ಅಪರಾಧಗಳ ಅಡಿ ಕೃಷ್ಣರಾಜಪೇಟೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು ಅರ್ಜಿದಾರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿರುತ್ತಾರೆ.