ಕರ್ನಾಟಕ

karnataka

ETV Bharat / state

ಕೋರ್ಟ್ ಆದೇಶ ಅರ್ಥವಾಗುವುದಿಲ್ಲವೇ: ಬಿಬಿಎಂಪಿಗೆ ಹೈಕೋರ್ಟ್ ಛೀಮಾರಿ - ದೇವಾಲಯ ತೆರವು ವಿರುದ್ಧ ಪ್ರಕರಣ

ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಆದೇಶಗಳನ್ನು ಅಧ್ಯಯನ ಮಾಡಿ, ಅಧಿಕಾರಿಗಳಿಗೆ ಸಲಹೆ ನೀಡುವ ಜವಾಬ್ದಾರಿಯನ್ನು ಯಾರಿಗೆ ವಹಿಸಲಾಗಿದೆ ಎಂಬುದನ್ನು ತಿಳಿಸುವಂತೆ ಬಿಬಿಎಂಪಿಗೆ ಹೈಕೋರ್ಟ್​ ಪೀಠ ತಾಕೀತು ಮಾಡಿದೆ.

ಬಿಬಿಎಂಪಿಗೆ ಹೈಕೋರ್ಟ್ ಛೀಮಾರಿ, High Court rebuke to BBMP over temple clearance
ಬಿಬಿಎಂಪಿಗೆ ಹೈಕೋರ್ಟ್ ಛೀಮಾರಿ

By

Published : Feb 4, 2020, 7:43 PM IST

ಬೆಂಗಳೂರು: ಬಿಬಿಎಂಪಿಯಲ್ಲಿ ಕಾನೂನು ವಿಭಾಗ ಇದೆಯೇ? ಅವರಿಗೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಆದೇಶಗಳು ಅರ್ಥ ಆಗುವುದಿಲ್ಲವೇ? ಎಂದು ಹೈಕೋರ್ಟ್ ಬಿಬಿಎಂಪಿಗೆ ಕಟುವಾಗಿ ಪ್ರಶ್ನಿಸಿದೆ.

ಸಾರ್ವಜನಿಕ ಪ್ರದೇಶಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ದೇವಸ್ಥಾನ, ಮಸೀದಿ, ಚರ್ಚ್ ನಂತಹ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಬಿಬಿಎಂಪಿ ಪರ ವಕೀಲರು ಸಲ್ಲಿಸಿದ ಅಸಮರ್ಪಕ ಮತ್ತು ದೋಷಪೂರಿತ ಪ್ರಮಾಣಪತ್ರ ಕಂಡು ಪೀಠ ತೀವ್ರ ಗರಂ ಆಯಿತು. ಬಿಬಿಎಂಪಿಯಲ್ಲಿ ಕಾನೂನು ವಿಭಾಗ ಇಲ್ಲವೇ? ಪ್ರತಿ ಪುಟದಲ್ಲೂ ತಪ್ಪುಗಳಿವೆ‌. ಹೈಕೋರ್ಟ್ ಆದೇಶವನ್ನೇ ತಪ್ಪಾಗಿ ಅರ್ಥೈಸಲಾಗಿದೆ. ನಿಮ್ಮ ಕಾನೂನು ವಿಭಾಗದಲ್ಲಿ ಎಷ್ಟು ವಕೀಲರಿದ್ದಾರೆ? ಯಾರೊಬ್ಬರಿಗೂ ಕೋರ್ಟ್ ನೀಡಿರುವ ಸರಳ ಆದೇಶ ಅರ್ಥವಾಗಿಲ್ಲವೇ? ಎಂದು ಪೀಠ ಕಟುವಾಗಿ ಪ್ರಶ್ನಿಸಿತು ಎಂದು ಹೇಳಲಾಗ್ತಿದೆ.

ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಆದೇಶಗಳನ್ನು ಅಧ್ಯಯನ ಮಾಡಿ, ಅಧಿಕಾರಿಗಳಿಗೆ ಸಲಹೆ ನೀಡುವ ಜವಾಬ್ದಾರಿಯನ್ನು ಯಾರಿಗೆ ವಹಿಸಲಾಗಿದೆ ಎಂಬುದನ್ನು ತಿಳಿಸುವಂತೆ ನ್ಯಾಯಪೀಠ ತಾಕೀತು ಮಾಡಿತು.

ಏನಿದು ಪ್ರಕರಣ?

ಹೈಕೋರ್ಟ್ 2019ರ ಅಕ್ಟೋಬರ್ 29 ರಂದು ಆದೇಶ ಹೊರಡಿಸಿ, ಸಾರ್ವಜನಿಕ ಪ್ರದೇಶಗಳಲ್ಲಿನ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡುವಂತೆ ಸೂಚಿಸಲಾಗಿತ್ತು. ಆದರೆ ಬಿಬಿಎಂಪಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಕೋರ್ಟ್ ಆದೇಶವನ್ನೇ ತಪ್ಪಾಗಿ ಅರ್ಥೈಸಲಾಗಿದೆ. ಅ.29 ನ್ನು ಸೆ.9 ಎಂದು ಬರೆದುಕೊಂಡಿದ್ದೀರಿ. ತೆರವು ವಿಚಾರಕ್ಕೆ ಸಂಬಂಧಿಸಿದಂತೆ 2009 ರಿಂದೀಚೆಗೆ ಮತ್ತು ಅದರ ಹಿಂದೆ ಎಂದು ವಿಭಾಗಿಸಿ ಲೆಕ್ಕ ಬರೆದಿದ್ದೀರಿ. ಹೀಗೆ ಲೆಕ್ಕ ಹಾಕಿಕೊಳ್ಳಲು ನಾವು ಯಾವಾಗ ಹೇಳಿದ್ದೆವು? ನಿಮಗೆ ಕೋರ್ಟ್ ನೀಡಿರುವ ಸರಳ ಆದೇಶವೂ ಅರ್ಥ ಆಗಿಲ್ಲವೆಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಕೋರ್ಟ್ ಆದೇಶ ಪಾಲಿಸುವಲ್ಲಿ ವಿಫಲವಾಗಿರುವ ಬಿಬಿಎಂಪಿ ಆಯುಕ್ತರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವ ಕುರಿತು ವಿವರಣೆ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿತು. ಕೊನೆಯಲ್ಲಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ಪೀಠ, ಕೋರ್ಟ್ ಆದೇಶ ಅರ್ಥ ಮಾಡಿಕೊಳ್ಳಲು ಅಸಮರ್ಥವಾಗಿರುವ ಬಿಬಿಎಂಪಿ ವಿರುದ್ಧ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿತು. ಈ ಸಂಬಂಧ ಎರಡು ವಾರದೊಳಗೆ ಪ್ರಮಾಣಪತ್ರ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿತು.

ಹಾಗೆಯೇ, ಮೂರು ವಾರಗಳಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ನಿರ್ಮಿಸಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡಬೇಕು ಮತ್ತು ಈ ಕಾರ್ಯಾಚರಣೆಗೆ ಪೊಲೀಸರು ಅಗತ್ಯ ರಕ್ಷಣೆ ನೀಡಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಮಾ.4 ಕ್ಕೆ ಮುಂದೂಡಿತು.

ABOUT THE AUTHOR

...view details