ಬೆಂಗಳೂರು : ಅತ್ಯಾಚಾರದಿಂದ ಸುಸ್ತಾಗಿ ಮಲಗಿಬಿಟ್ಟೆ ಎಂದು ಹೇಳುವುದು ಭಾರತೀಯ ನಾರಿಯ ಲಕ್ಷಣವಲ್ಲ. ನಮ್ಮ ನಾಡಿನ ಮಹಿಳೆಯರು ಅವರ ಮೇಲೆ ಆಕ್ರಮಣವಾದಾಗ ನಡೆದುಕೊಳ್ಳುವ ರೀತಿಯೂ ಇದಲ್ಲ ಎಂದು ಹೈಕೋರ್ಟ್ ಅತ್ಯಾಚಾರ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡುವ ವೇಳೆ, ಈ ರೀತಿ ಅಭಿಪ್ರಾಯಪಟ್ಟಿದೆ.
ಅತ್ಯಾಚಾರ ಆರೋಪ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ರಾಕೇಶ್ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಆರೋಪಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಪ್ರಕರಣವನ್ನು ವಿಶ್ಲೇಷಿಸಿರುವ ಪೀಠ, ಮಹಿಳೆಯ ಆರೋಪಗಳನ್ನು ಈ ಹಂತದಲ್ಲೇ ನಂಬುವುದು ಕಷ್ಟ ಎಂದು ಹೇಳಿದೆ.
ಅತ್ಯಾಚಾರ ಆರೋಪ ಹೊತ್ತಿರುವ ವ್ಯಕ್ತಿ ಸಂತ್ರಸ್ತ ಮಹಿಳೆಯ ಮಾಲೀಕತ್ವದ ಸಂಸ್ಥೆಯಲ್ಲೇ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಈತ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ ಸಂದರ್ಭದಲ್ಲೇ ಏಕೆ ಕಾನೂನಿನ ಮೊರೆ ಹೋಗಲಿಲ್ಲ. ಹಾಗೆಯೇ, ಸಂಧಾನ ಮಾಡಿಕೊಳ್ಳಲು ಒಪ್ಪಿದರೆ ದೂರನ್ನು ವಾಪಸ್ ಪಡೆಯುವುದಾಗಿ ಮಹಿಳೆ ಪತ್ರ ಬರೆದಿರುವ ಆರೋಪವಿದೆ. ಹೀಗಾಗಿ ದೂರುದಾರ ಮಹಿಳೆ ಹೇಳಿರುವಂತೆ ಮದುವೆಯಾಗುವುದಾಗಿ ಸುಳ್ಳು ಹೇಳಿ ಆರೋಪಿ ಅತ್ಯಾಚಾರ ಎಸಗಿದ್ದಾರೆ ಎಂಬುದನ್ನು ಈ ಹಂತದಲ್ಲೇ ನಂಬುವುದಕ್ಕೆ ಕಷ್ಟವಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅಲ್ಲದೇ, ಮಹಿಳೆಯು ಆರೋಪಿಯ ಜೊತೆಯಲ್ಲೇ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಇದಕ್ಕೂ ಮುನ್ನ ಆರೋಪಿ ಕುಡಿದು ಬಂದು ಕಾರು ಹತ್ತಿದ ಎಂದು ಹೇಳಿರುವ ಮಹಿಳೆ, ಈ ವೇಳೆ ಪೊಲೀಸರನ್ನಾಗಲಿ, ಸಾರ್ವಜನಿಕರನ್ನಾಗಲಿ ಸಹಾಯಕ್ಕಾಗಿ ಕೂಗಿದ ಬಗ್ಗೆ ವಿವರಣೆ ನೀಡಿಲ್ಲ. ಅಷ್ಟಕ್ಕೂ ಕೃತ್ಯ ನಡೆದ ದಿನ ರಾತ್ರಿ 11 ಗಂಟೆಗೆ ಕಚೇರಿಗೆ ಹೋಗಿದ್ದೇಕೆ ಎಂಬುದರ ಬಗ್ಗೆಯೂ ವಿವರಿಸಿಲ್ಲ. ಜತೆಗೆ ರಾತ್ರಿ ಪೂರ್ತಿ ಆರೋಪಿಯೊಂದಿಗೆ ಉಳಿದಿದ್ದಾರೆ. ಜತೆಗೆ ತನ್ನ ಮೇಲೆ ಅತ್ಯಾಚಾರ ನಡೆದು ಸುಸ್ತಾಗಿದ್ದರಿಂದ ಮಲಗಿಬಿಟ್ಟೆ ಎಂದಿದ್ದಾರೆ. ಇದು ನಮ್ಮ ಮಹಿಳೆಯರು ನಡೆದುಕೊಳ್ಳುವ ರೀತಿಯಲ್ಲ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.