ಕರ್ನಾಟಕ

karnataka

ETV Bharat / state

ದ್ವಿತೀಯ ಪಿಯು ರಿಪೀಟರ್ಸ್​ಗಳನ್ನು ಪಾಸ್​ ಮಾಡುವ ಬಗ್ಗೆ ತಿಳಿಸಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಪರೀಕ್ಷೆ ನಡೆಸದೇ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ನೋಟಿಫಿಕೇಷನ್ ರದ್ದು ಕೋರಿ ನಗರದ ಜ್ಞಾನಮಂದಿರ ಎಜುಕೇಷನ್ ಟ್ರಸ್ಟ್ ನ ಎಸ್.ವಿ ಸಿಂಗ್ರೇಗೌಡ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ.

high-court
ಹೈಕೋರ್ಟ್

By

Published : Jun 15, 2021, 3:42 PM IST

ಬೆಂಗಳೂರು:ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸು ಮಾಡುವ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್, ಪುನರಾವರ್ತಿತ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವ ಕುರಿತು ಪರಿಶೀಲಿಸಿ ನಿರ್ಧಾರ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಪರೀಕ್ಷೆ ನಡೆಸದೆ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ನೋಟಿಫಿಕೇಷನ್ ರದ್ದು ಕೋರಿ ನಗರದ ಜ್ಞಾನಮಂದಿರ ಎಜುಕೇಷನ್ ಟ್ರಸ್ಟ್ ನ ಎಸ್.ವಿ ಸಿಂಗ್ರೇಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಆರ್.ಪಿ ಸೋಮಶೇಖರಯ್ಯ ವಾದ ಮಂಡಿಸಿ, ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಉತ್ತೀರ್ಣಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಪ್ರಥಮ ಪಿಯು ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ದ್ವಿತೀಯ ಪಿಯು ಪಾಸು ಮಾಡಲು ಮುಂದಾಗಿದೆ. ಇದೇ ಸೌಲಭ್ಯವನ್ನು ಪುನರಾವರ್ತಿತ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು, ಇಲ್ಲದಿದ್ದರೆ ತಾರತಮ್ಯ ಮಾಡಿದಂತಾಗುತ್ತದೆ ಎಂದರು.

ವಾದ ಪರಿಗಣಿಸಿದ ಪೀಠ, ಪ್ರಥಮ ಪಿಯು ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ಪುನರಾವರ್ತಿತ ವಿದ್ಯಾರ್ಥಿಗಳನ್ನೂ ಉತ್ತೀರ್ಣಗೊಳಿಸುವ ಕುರಿತು ರಾಜ್ಯ ಸರ್ಕಾರ ತನ್ನ ನಿಲುವು ತಿಳಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು ಜೂನ್ 17ಕ್ಕೆ ಮುಂದೂಡಿತು.

ಅರ್ಜಿದಾರರ ಕೋರಿಕೆ: ಪ್ರಸ್ತಕ ಸಾಲಿನಲ್ಲಿ 7 ಲಕ್ಷ ದ್ವಿತೀಯ ಪಿಯು ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಬೇಕಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸದೇ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪಾಸು ಮಾಡಲು ಸರ್ಕಾರ ನಿರ್ಧರಿಸಿದೆ. ಪ್ರಥಮ ಪಿಯು ಪರೀಕ್ಷೆ ಅಂಕ ಪರಿಗಣಿಸಿ ಉತ್ತೀರ್ಣ ಮಾಡುವ ಸಂಬಂಧ ಜೂನ್ 3ರಂದು ರಾಜ್ಯ ಸರ್ಕಾರ ನೋಟಿಫಿಕೇಷನ್ ಹೊರಡಿಸಿದೆ.

ಆದರೆ, ಪುನರಾವರ್ತಿತ ಮತ್ತು ಖಾಸಗಿ ಅಭ್ಯರ್ಥಿಗಳಿಗೆ ಈ ಅನುಕೂಲ ಕಲ್ಪಿಸಿಲ್ಲ. ಇದು ತಾರತಮ್ಯ ನೀತಿಯಾಗಿದೆ. ರಾಜ್ಯದಲ್ಲಿ 95 ಸಾವಿರ ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ. ಅವರನ್ನೂ ಪರೀಕ್ಷೆ ಇಲ್ಲದೇ ಉತ್ತೀರ್ಣ ಮಾಡಬೇಕು. ಇಲ್ಲದಿದ್ದರೆ ಸರ್ಕಾರದ ನೋಟಿಫಿಕೇಷನ್ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಓದಿ:ಜುಲೈ 15 ರಿಂದ ಪದವಿ ಕೋರ್ಸ್​ಗಳಿಗೆ ಅಡ್ಮಿಷನ್ ಪೋರ್ಟಲ್ ಸಿದ್ಧ: ಡಿಸಿಎಂ ಅಶ್ವತ್ಥ್​ ನಾರಾಯಣ

ABOUT THE AUTHOR

...view details