ಕರ್ನಾಟಕ

karnataka

ETV Bharat / state

ಮುರುಘಾ ಮಠದ ಶಿವಮೂರ್ತಿ ಶ್ರೀಗಳ ವಿರುದ್ದದ ಪಿತೂರಿ ಆರೋಪ: ಬಸವರಾಜನ್, ಸೌಭಾಗ್ಯ ಪ್ರಕರಣ ರದ್ದುಪಡಿಸಿದ ಹೈಕೋರ್ಟ್ - ಈಟಿವಿ ಭಾರತ್ ಕನ್ನಡ ಸುದ್ದಿ

ಶಿವಮೂರ್ತಿ ಮುರುಘಾ ಶರಣರ ವಿರುದ್ದ ಪಿತೂರಿ ಮಾಡಿದ ಆರೋಪದಲ್ಲಿ ಬಸವರಾಜನ್ ಹಾಗೂ ಅವರ ಪತ್ನಿ ಸೌಭಾಗ್ಯ ವಿರುದ್ಧದ ಪ್ರಕರಣವನ್ನು ಹೈಕೋರ್ಟ್​ ರದ್ದುಪಡಿಸಿ ಆದೇಶಿಸಿದೆ.

ಹೈಕೋರ್ಟ್
ಹೈಕೋರ್ಟ್

By ETV Bharat Karnataka Team

Published : Nov 3, 2023, 8:38 PM IST

ಬೆಂಗಳೂರು :ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ವಿರುದ್ದ ಪಿತೂರಿ ಮಾಡಿದ ಆರೋಪದಲ್ಲಿ ಮಾಜಿ ಶಾಸಕ ಹಾಗೂ ಮಠದ ಆಡಳಿತಾಧಿಕಾರಿಯೂ ಆಗಿದ್ದ ಬಸವರಾಜನ್ ಹಾಗೂ ಅವರ ಪತ್ನಿ ಸೌಭಾಗ್ಯ ವಿರುದ್ದದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.

ತಮ್ಮ ವಿರುದ್ದದ ಪ್ರಕರಣ ರದ್ದುಕೋರಿ ಬಸವರಾಜನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್ ದೇವದಾಸ್ ಅವರಿದ್ದ ಪೀಠ, ಪ್ರಕರಣ ರದ್ದುಪಡಿಸಿ ಆದೇಶಿಸಿದೆ. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಪೀಠ ಶುಕ್ರವಾರ ತೀರ್ಪು ಪ್ರಕಟಿಸಿತು. ಇನ್ನಷ್ಟೇ ಆದೇಶದ ಪ್ರತಿ ಲಭ್ಯವಾಗಬೇಕಿದೆ.

ಪ್ರಕರಣ ಸಂಬಂಧ ಈ ಹಿಂದೆ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ದೂರುದಾರ ಬಸವಪ್ರಭು ಸ್ವಾಮೀಜಿ ಅವರು ಅರ್ಜಿದಾರರ ವಿರುದ್ಧ ದಾಖಲಿಸಿರುವ ಈ ದೂರಿನಲ್ಲಿ ಯಾವುದೇ ಹುರುಳಿಲ್ಲ. ಪೋಕ್ಸೋ ಪ್ರಕರಣದ ಆರೋಪಗಳಿಂದ ಶಿವಮೂರ್ತಿ ಶರಣರಿಗೆ ರಕ್ಷಣೆ ಒದಗಿಸಲು ಅರ್ಜಿದಾರರ ವಿರುದ್ಧ ಈ ಪ್ರತಿ ದೂರು ದಾಖಲಿಸಲಾಗಿದೆ ಎಂದು ವಿವರಿಸಿದರು.

ಈ ವಾದವನ್ನು ಆಕ್ಷೇಪಿಸಿದ ಸರ್ಕಾರಿ ವಕೀಲರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಪೀಠ, ಪೋಕ್ಸೋ ಪ್ರಕರಣದಲ್ಲಿ ಅರ್ಜಿದಾರರು ಸಹ ಸಾಕ್ಷಿಗಳಾಗಿದ್ದಾರೆ. ಅವರ ವಿರುದ್ಧ ಪ್ರತಿ ದೂರು ದಾಖಲಿಸಿರುವಾಗ ಸಾಕ್ಷಿಗಳ ರಕ್ಷಣೆ ಹೇಗೆ ತಾನೆ ಸಾಧ್ಯ?. ಪೋಕ್ಸೋ ಪ್ರಕರಣದ ವಿಚಾರಣೆ ದಿಕ್ಕು ತಪ್ಪುವುದಿಲ್ಲವೇ? ಶರಣರ ವಿರುದ್ಧದ ಪೋಕ್ಸೋ ಪ್ರಕರಣ ಚಿತ್ರದುರ್ಗ ಸೆಷನ್ಸ್‌ ಕೋರ್ಟ್‌ನಲ್ಲಿ ವಿಚಾರಣೆ ಹಂತ ತಲುಪಿದೆ. ಆ ವಿಚಾರಣೆ ಪೂರ್ಣಗೊಂಡರೆ, ಎಲ್ಲ ಸತ್ಯಾಂಶ ಹೊರಬರುತ್ತದೆಯಲ್ಲವೇ? ಎಂದು ಕೇಳಿ, ಅರ್ಜಿಯ ಹೆಚ್ಚಿನ ವಿಚಾರಣೆಯನ್ನು ಪೂರ್ಣಗೊಳಿಸಿತು.

ಪ್ರಕರಣದ ಹಿನ್ನೆಲೆ ಏನು? : ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಶಿವಮೂರ್ತಿ ಶರಣರ ವಿರುದ್ಧ ಸುಳ್ಳು ಕೇಸು ದಾಖಲಿಸಲು ಹಲವು ಪಟ್ಟಭದ್ರ ಹಿತಾಸಕ್ತಿಗಳು ಸಂತ್ರಸ್ತ ಬಾಲಕಿಯರು ಹಾಗೂ ಅವರ ತಾಯಿಯನ್ನು ಪ್ರೇರೇಪಿಸಿದ್ಧಾರೆ. ಹಣ ಪಡೆಯಬೇಕೆನ್ನುವ ಮತ್ತು ಮಠಕ್ಕೆ ಮೋಸ ಮಾಡುವ ಉದ್ದೇಶದಿಂದ ಸುಳ್ಳು ಕೇಸು ದಾಖಲಿಸಿರುತ್ತಾರೆ. ಈ ವ್ಯವಸ್ಥಿತ ಪಿತೂರಿಯ ಹಿಂದೆ ಇರುವವರನ್ನು ಬಂಧಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಮಠದ ಉಸ್ತುವಾರಿ ಸ್ವಾಮೀಜಿಯೂ ಆದ ಬಸವಪ್ರಭು ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಸಂಬಂಧ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು, ಪಿತೂರಿ ಮತ್ತು ಹಣದ ಸುಲಿಗೆಗೆ ಪ್ರಯತ್ನಿಸಿದ ಆರೋಪದಡಿ ಅರ್ಜಿದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಂಡಿದ್ದರು.

ಇದನ್ನೂ ಓದಿ:ಮುರುಘಾ ಶರಣರ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ABOUT THE AUTHOR

...view details