ಬೆಂಗಳೂರು: ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸದೆ ಚಿಕ್ಕಬಳ್ಳಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಭೋಗ ನಂದೀಶ್ವರ ದೇವಸ್ಥಾನದ ಅರ್ಚಕರನ್ನು ಸೇವೆಯಿಂದ ವಜಾಗೊಳಿಸಿದ ರಾಜ್ಯ ಧಾರ್ಮಿಕ ದತ್ತಿ ಆಯುಕ್ತರ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಈ ಸಂಬಂಧ ಅರ್ಚಕ ಟಿ.ಸಿ.ಆಶ್ವೀಜ (28) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ಪುರಸ್ಕರಿಸಿದ್ದು, ಧಾರ್ಮಿಕ ದತ್ತಿ ಇಲಾಖೆ ಆದೇಶವನ್ನು ರದ್ದು ಪಡಿಸಿ ಆದೇಶಿಸಿದೆ. ಅಲ್ಲದೆ, ಪ್ರಕರಣ ಸಂಬಂಧ ಅರ್ಜಿದಾರರಿಗೆ ಸೂಕ್ತ ಅವಕಾಶ ಕಲ್ಪಿಸಿ ಅವರ ವಾದ ಆಲಿಸಿ, ಎರಡು ವಾರಗಳಲ್ಲಿ ವಿಚಾರಣೆ ಪೂರ್ಣಗೊಳಿಸಬೇಕು ಎಂದು ರಾಜ್ಯ ಧಾರ್ಮಿಕ ದತ್ತಿ ಆಯುಕ್ತರಿಗೆ ನಿರ್ದೇಶಿಸಿರುವ ಹೈಕೋರ್ಟ್, ಅಲ್ಲಿವರೆಗೆ ಅರ್ಜಿದಾರರಿಗೆ ದೇವಾಲಯದಲ್ಲಿ ಅರ್ಚಕರಾಗಿ ಮುಂದುವರೆಯಲು ಅನುಮತಿ ನೀಡಿದೆ.
ಪ್ರಕರಣದ ಹಿನ್ನೆಲೆ:ಅರ್ಜಿದಾರರು ಭೋಗ ನಂದೀಶ್ವರ ದೇವಾಲಯದ ಅರ್ಚಕರಾಗಿ 2015ರಲ್ಲಿ ನೇಮಕಗೊಂಡಿದ್ದರು. ಕರ್ತವ್ಯ ನಿರ್ವಹಣೆಯಲ್ಲಿ ಅರ್ಚಕರು ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಅನಾಮಧೇಯ ಪತ್ರ ಬಂದಿತ್ತು. ಪತ್ರದಲ್ಲಿ ಅರ್ಚಕರು ಎರಡು ಮದ್ಯದ ಬಾಟಲಿ ಹೊಂದಿರುವ ಫೋಟೋ ಲಗತ್ತಿಸಲಾಗಿತ್ತು. ಈ ಸಂಬಂಧ ವಿವರಣೆ ಕೇಳಿ ನೀಡಿದ್ದ ಶೋಕಾಸ್ ನೋಟಿಸ್‌ಗೆ ಅರ್ಜಿದಾರರು ಉತ್ತರಿಸಿದ್ದರು. ನಂತರ ಅವರನ್ನು ಅಮಾನತು ಮಾಡಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದರು.