ಬೆಂಗಳೂರು :ನಗರದ ಮಹಾಲಕ್ಷ್ಮಿ ಬಡಾವಣೆಯ 12ನೇ ಮುಖ್ಯರಸ್ತೆಯ ನಿವೇಶನವೊಂದರಲ್ಲಿ ಪೆಟ್ರೋಲ್ ಪಂಪ್ ನಡೆಸಲು ಅನುಮತಿ ನೀಡಿ ಬಿಬಿಎಂಪಿ ಹಾಗೂ ನಗರ ಪೊಲೀಸ್ ಆಯುಕ್ತರು ನೀಡಿದ್ದ ನಿರಾಕ್ಷೇಪಣಾ ಪತ್ರವನ್ನು (ಎನ್ಒಸಿ) ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ಪರಿಷ್ಕೃತ ಮಹಾ ಯೋಜನೆ 2015ರ (ಆರ್‌ಎಂಪಿ) ವಲಯ ನಿಯಮಗಳಿಗೆ ವಿರುದ್ಧವಾಗಿ ಎನ್ಒಸಿ ನೀಡಲಾಗಿದೆ ಎಂದು ಆಕ್ಷೇಪಿಸಿ ಸ್ಥಳೀಯ ನಿವಾಸಿಗಳಾದ ಸುವರ್ಣಮ್ಮ ಹಾಗೂ ವಿ.ಎಸ್.ಶೆಟ್ಟರ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಆರ್‌ಎಂಪಿಯ ವಲಯ ನಿಯಮಗಳ ಪಟ್ಟಿ 7ರಲ್ಲಿ ಉಲ್ಲೇಖಿಸಿರುವ ಪ್ರಕಾರ ಪೆಟ್ರೋಲ್ ಪಂಪ್ ಸ್ಥಾಪಿಸುವ ನಿವೇಶನವಿರುವ ರಸ್ತೆ ಕನಿಷ್ಠ 18 ಮೀಟರ್ ಅಗಲವಿರಬೇಕು ಹಾಗೂ ನಿವೇಶನದ ವಿಸ್ತೀರ್ಣ ಕನಿಷ್ಠ 500 ಚದರ ಮೀಟರ್ ಇರಬೇಕು. ಆದರೆ, ಬಿಡಿಎ ಅಧಿಕಾರಿಗಳ ಸ್ಥಳ ಪರಿಶೀಲನಾ ವರದಿಯ ಪ್ರಕಾರ ವಿವಾದಿತ ನಿವೇಶನದ ವಿಸ್ತೀರ್ಣ ಕೇವಲ 240 ಚದರ ಮೀಟರ್ ಹಾಗೂ ರಸ್ತೆಯ ಅಗಲ 15 ಮೀಟರ್ ಇದೆ.
ಓದಿ :ಗ್ರಾಹಕರೇ ಎಚ್ಚರ.. ಎಚ್ಚರ.. ಪೆಟ್ರೋಲ್ ಬಂಕ್ನಲ್ಲಿ ನಡೆಯುತ್ತೆ ಚಿಪ್ ವಂಚನೆ..!
ಆದ್ದರಿಂದ ಉದ್ದೇಶಿತ ನಿವೇಶನದಲ್ಲಿ ಪೆಟ್ರೋಲ್ ಪಂಪ್ ಸ್ಥಾಪನೆಗೆ ಹಾಗೂ ಇಂಧನ ಶೇಖರಣೆಗೆ ಅವಕಾಶ ಕಲ್ಪಿಸಿ ನೀಡಲಾಗಿರುವ ನಿರಾಕ್ಷೇಪಣಾ ಪತ್ರ ರದ್ದುಪಡಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, 2020ರ ಮಾ.19ರಂದು ಪಾಲಿಕೆ ಆಯುಕ್ತರು ಹಾಗೂ ಮೇ 20ರಂದು ಪೊಲೀಸ್ ಆಯುಕ್ತರು ನೀಡಿದ್ದ ಎನ್ಒಸಿಗಳನ್ನು ರದ್ದುಪಡಿಸಿದೆ.