ಬೆಂಗಳೂರು: ವಿಜಯನಗರ ಜಿಲ್ಲೆಯ ಹೊಸಪೇಟೆಯ ಸಿಎಂಸಿ ಸರ್ಕಾರಿ ಪ್ರೌಢಶಾಲೆಯ ಆವರಣದ ಗೋಡೆಯಲ್ಲಿ, ಹಿಜಾಬ್ ನಮ್ಮ ಘನತೆ ಎಂಬುದಾಗಿ ಕಪ್ಪು ಬಣ್ಣದಲ್ಲಿ ಬರೆದಿದ್ದ ಇಬ್ಬರು ಯುವಕರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ. ಕರ್ನಾಟಕ ಸಾರ್ವಜನಿಕ ಸ್ಥಳಗಳ (ವಿರೂಪ ನಿಷೇಧ) ಕಾಯಿದೆ ಸೆಕ್ಷನ್ 3ರ ಅಡಿ ಪ್ರಕ್ರಿಯೆ ವಜಾ ಮಾಡುವಂತೆ ಕೋರಿ ವಿಜಯನಗರದ ಮುಜಾಮಿಲ್ ಮತ್ತು ಮೊಹಮ್ಮದ್ ಜಮೌಲ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಧಾರವಾಡ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿತು.
ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಬೆಳಗಾವಿ ನಗರಗಳು ಮಾತ್ರ ಈ ಕರ್ನಾಟಕ ಸಾರ್ವಜನಿಕ ಸ್ಥಳಗಳ (ವಿರೂಪ ನಿಷೇಧ) ಕಾಯಿದೆ ಅಡಿಯಲ್ಲಿ ಬರಲಿವೆ. ಆದರೆ, ಆರೋಪಿಗಳ ವಿರುದ್ಧ ಕರ್ನಾಟಕ ಸಾರ್ವಜನಿಕ ಸ್ಥಳಗಳ (ವಿರೂಪ ನಿಷೇಧ) ಕಾಯಿದೆ ಸೆಕ್ಷನ್ 3ರ( ಅನಧಿಕೃತವಾಗಿ ವಿರೂಪಗೊಳಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 1 ಕಟ್ಟುನಿಟ್ಟಾಗಿ ಪಾಲಿಸದೆ ಸೆಕ್ಷನ್ 3 ಅಡಿಯಲ್ಲಿ ಕ್ರಮಕ್ಕೆ ಮುಂದಾಗುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ ಸೆಕ್ಷನ್ 1ರ ಪ್ರಕಾರ ನಿರ್ದಿಷ್ಟ ಸ್ಥಳ/ಸ್ಥಳೀಯ ಪ್ರದೇಶವನ್ನು ಕಾಯಿದೆಯ ವ್ಯಾಪ್ತಿಗೆ ಒಳಪಡಿಸಬೇಕು. ಈ ಸಂಬಂಧ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸುವುದು ಕಡ್ಡಾಯ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.