ಕರ್ನಾಟಕ

karnataka

ETV Bharat / state

ಅತ್ಯಾಚಾರ ಆರೋಪ ಕೇಸ್​ ರದ್ದು; ಮಹಿಳೆಗೆ ಮಗು ಕರುಣಿಸಿದ್ದಕ್ಕೆ ಜೀವನಾಂಶ ನೀಡುವಂತೆ ವ್ಯಕ್ತಿಗೆ ಹೈಕೋರ್ಟ್​ ಆದೇಶ - ಮಾಸಿಕ ಜೀವನಾಂಶ

ಮದುವೆಯಾಗುವುದಾಗಿ ನಂಬಿಸಿ ಮಗುವಾದ ಬಳಿಕ ವಂಚಿಸಿದ ವ್ಯಕ್ತಿ ವಿರುದ್ಧದ ಪ್ರಕರಣವನ್ನು ಹೈಕೋರ್ಟ್​ ರದ್ದುಪಡಿಸಿದ್ದು, ಸಂತ್ರಸ್ತೆಗೆ ಮಾಸಿಕ ಜೀವನಾಂಶ ನೀಡುವಂತೆ ನ್ಯಾಯಾಲಯ ತಿಳಿಸಿದೆ.

high-court-quashed-the-case-against-man-cheated-woman-and-ordered-him-to-pay-sustenance
ಮದುವೆಯಾಗುವುದಾಗಿ ನಂಬಿಸಿ ಮಗುವಾದ ಬಳಿಕ ಕೈಕೊಟ್ಟಿದ್ದ ವ್ಯಕ್ತಿ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್, ಜೀವನಾಂಶ ನೀಡಲು ಆದೇಶ

By ETV Bharat Karnataka Team

Published : Dec 30, 2023, 10:31 PM IST

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ನಂತರ ನಿರಾಕರಿಸಿದ್ದ ವ್ಯಕ್ತಿಯ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ಜೊತೆಗೆ ದೂರುದಾರರು ಮತ್ತು ಅರ್ಜಿದಾರರ ನಡುವೆ ದೈಹಿಕ ಸಂಪರ್ಕವಿದ್ದು, ಮಾಸಿಕ ಜೀವನ ನಿರ್ವಹಣೆಗೆ ಜೀವನಾಂಶ ನೀಡಲು ಸೂಚನೆ ನೀಡಿದೆ. ಸಂತ್ರಸ್ತ ಮಹಿಳೆ ಸಲ್ಲಿಸಿದ್ದ ದೂರು ಪ್ರಶ್ನಿಸಿ ಗದಗದ ರಾಘವ (ಹೆಸರು ಬದಲಿಸಲಾಗಿದೆ) ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ.

ಅಲ್ಲದೆ, ಪ್ರಕರಣ ಸಂಬಂಧ ದೂರುದಾರರು ಹಾಗೂ ಅರ್ಜಿದಾರರಿಗೆ ಜನಿಸಿದ್ದ ಮಗುವಿನ ಡಿಎನ್‌ಎ ಒಂದೇ ಆಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಆ ಮಹಿಳೆಯ ಮಗುವಿನ ನಿರ್ವಹಣೆಗೆ ಪ್ರತಿ ತಿಂಗಳು 10 ಸಾವಿರ ರೂ. ಜೀವನಾಂಶ ಪಾವತಿಸಲು ಸೂಚನೆ ನೀಡಿದೆ. ಜತೆಗೆ, ಅರ್ಜಿದಾರರ ವಿರುದ್ಧ ಮಹಿಳೆ ಹೂಡಿದ್ದ ಅತ್ಯಾಚಾರ ಆರೋಪ ಪ್ರಕರಣ ರದ್ದುಗೊಳಿಸಿ, ಇದು ಒಪ್ಪಿತ ಲೈಂಗಿಕ ಸಂಬಂಧವಾಗಿದೆ ಮತ್ತು ಮದುವೆಯಾಗುವುದಾಗಿ ನಂಬಿಸಿ ಅದರ ಮೇಲೆ ಪರಸ್ಪರ ಲೈಂಗಿಕ ಸಂಬಂಧ ಬೆಳೆಸಿರುವುದರಿಂದ ಅದು ಅತ್ಯಾಚಾರವಾಗುವುದಿಲ್ಲ ಎಂದು ಆದೇಶ ನೀಡಿದೆ.

ಪ್ರಕರಣ ಸಂಬಂಧ ದಾಖಲಿಸಲಾಗಿರುವ ಹೇಳಿಕೆಗಳು ಮತ್ತು ಡಿಎನ್‌ಎ ವರದಿಯ ಪ್ರಕಾರ ಮಗು ಜನಿಸಿರುವುದು ಆರೋಪಿ ಮತ್ತು ಸಂತ್ರಸ್ತೆಗೆ ಎಂಬುದು ಗೊತ್ತಾಗಿದೆ. ಆದರೆ ಸಂತ್ರಸ್ತೆಯನ್ನು ಆಕೆಯ ಪತಿ ಕೂಡ ಕೈಬಿಟ್ಟಿರುವುದರಿಂದ ಆಕೆ ನಿಜಕ್ಕೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆರೋಪಿ ಮತ್ತು ಸಂತ್ರಸ್ತೆಯ ಜಗಳದಲ್ಲಿ ಅಮಾಯಕ ಕೂಸು ತೊಂದರೆಗೆ ಸಿಲುಕಿದಂತಾಗಿದೆ. ಆದ್ದರಿಂದ ಬಯಲಾಜಿಕಲ್ (ವಂಶಿಯ) ತಂದೆಯಾಗಿರುವ ಆರೋಪಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದು. ಅವರು ಅಧೀನ ನ್ಯಾಯಾಲಯದಲ್ಲಿನ ವಿಚಾರಣೆ ಪೂರ್ಣಗೊಳ್ಳುವವರೆಗೆ ಮಗುವಿನ ನಿರ್ವಹಣೆಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿಗಳ ಜೀವನಾಂಶ ಪಾವತಿಸಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ :ಅರ್ಜಿದಾರರು ಮತ್ತು ಸಂತ್ರಸ್ತೆ 2018 ರಿಂದ ಪರಸ್ಪರ ಪ್ರೀತಿಸುತ್ತಿದ್ದರು ಮತ್ತು ಅವರ ನಡುವೆ ದೈಹಿಕ ಸಂಬಂಧ ಬೆಳೆದಿತ್ತು. ಆದರೆ ಆಕೆಯನ್ನು ಮನೆಯವರು ಬೇರೊಬ್ಬ ವ್ಯಕ್ತಿಯೊಂದಿಗೆ 2021ರಲ್ಲಿ ಬಲವಂತವಾಗಿ ಮದುವೆ ಮಾಡಿಸಿದ್ದರು. ಆದರೆ ಆಕೆಯ ಮತ್ತು ಪತಿಯ ನಡುವಿನ ಸಂಬಂಧ ಹಳಸಿದ್ದರಿಂದ ಆಕೆ ತವರು ಮನೆಗೆ ಹಿಂತಿರುಗಿದ್ದಳು. ಬಳಿಕ ಮತ್ತೆ ಆರೋಪಿಯೊಂದಿಗೆ ಸ್ನೇಹ ಬೆಳೆಸಿದ್ದರು. ಆರೋಪಿ ಮದುವೆಯಾಗುವುದಾಗಿ ಹೇಳಿ ಆಕೆಯನ್ನು ವಂಚಿಸಿ, ಮತ್ತೋರ್ವ ಯುವತಿಯನ್ನು ವರಿಸಲು ಮುಂದಾಗಿದ್ದ. ಹಾಗಾಗಿ ಆ ಮಹಿಳೆ ವ್ಯಕ್ತಿಯ ವಿರುದ್ಧ ವಂಚನೆ ಹಾಗೂ ಅತ್ಯಾಚಾರ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ :ಪೋಕ್ಸೋ ಪ್ರಕರಣ: ಸಾಕ್ಷ್ಯಾಧಾರ ಸೂಕ್ಷ್ಮವಾಗಿ ಪರಿಗಣಿಸದ ನ್ಯಾಯಾಧೀಶರಿಗೆ ತರಬೇತಿ; ಹೈಕೋರ್ಟ್ ಸೂಚನೆ

ABOUT THE AUTHOR

...view details