ಬೆಂಗಳೂರು:ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ತುಮಕೂರಿನ ಜೆಎಂಎಫ್ಸಿ ಕೋರ್ಟ್ ಪೊಲೀಸರಿಗೆ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿ ದೂರನ್ನು ಹೊಸದಾಗಿ ಪರಿಗಣಿಸುವಂತೆ ನಿರ್ದೇಶಿಸಿದೆ.
ತುಮಕೂರಿನ ಕ್ಯಾತಸಂದ್ರ ಠಾಣೆ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ನಟಿ ಕಂಗನಾ ರಣಾವತ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾ. ಎಚ್. ಪಿ ಸಂದೇಶ್ ಅವರಿದ್ದ ಏಕಸದಸ್ಯ ಪೀಠ ಇಂದು ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಖಾಸಗಿ ದೂರಿನ ವಿಚಾರಣೆ ನಡೆಸಿರುವ ಮ್ಯಾಜಿಸ್ಟ್ರೇಟ್ ಯಾಂತ್ರಿಕವಾಗಿ ಎಫ್ಐಆರ್ ದಾಖಲಿಸಲು ಆದೇಶಿಸಿದ್ದಾರೆ. ದೂರಿನಲ್ಲಿರುವ ವಿಚಾರಗಳೇನು, ಅದು ಅಪರಾಧವಾಗುತ್ತದೆಯೇ ಎಂಬುದನ್ನು ಪರೀಕ್ಷಿಸಿಲ್ಲ. ಹೀಗಾಗಿ ನ್ಯಾಯಾಲಯ ಖಾಸಗಿ ದೂರಿನಲ್ಲಿರುವ ಅಂಶಗಳು ಅಪರಾಧ ಎನ್ನಿಸಿಕೊಳ್ಳುತ್ತವೆಯೇ ಎಂಬುದನ್ನು ಪರಿಶೀಲಿಸಿ ಹೊಸದಾಗಿ ನಿರ್ಣಯಿಸಬೇಕು ಎಂದು ನಿರ್ದೇಶಿಸಿತು.
ಜೊತೆಗೆ ಎಫ್ಐಆರ್ ದಾಖಲಿಸಲು ಮ್ಯಾಜಿಸ್ಟ್ರೇಟ್ ಹೊರಡಿಸಿದ್ದ ಆದೇಶ ರದ್ದುಪಡಿಸಿತು.ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಕಂಗನಾ ಪರ ವಕೀಲರು ವಾದಿಸಿ, ಅರ್ಜಿದಾರರ ಟ್ವೀಟ್ನಲ್ಲಿ ಯಾವುದೇ ದುರುದ್ದೇಶವಿರಲಿಲ್ಲ. ದ್ವೇಷ ಬಿತ್ತುವ ಉದ್ದೇಶವೂ ಇರಲಿಲ್ಲ. ತಮ್ಮ ಅಭಿಮಾನಿಗಳನ್ನು ಎಚ್ಚರಿಸುವ ಉದ್ದೇಶದಿಂದ, ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಎಂಬ ನಿಟ್ಟಿನಲ್ಲಿ ಟ್ವೀಟ್ ಮಾಡಿದ್ದರು. ಆದರೆ ಇದನ್ನೇ ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ರೈತ ಕಾಯ್ದೆಗಳನ್ನು ವಿರೋಧಿಸುವವರು ಭಯೋತ್ಪಾದಕರು ಎಂದು ಹೇಳಲು ನಿಮಗೆ ಅಧಿಕಾರ ಕೊಟ್ಟವರು ಯಾರು. ಇದೇ ಮಾತನ್ನು ನಿಮ್ಮ ವಿರುದ್ಧ ಆಡಿದರೆ ಏನು ಮಾಡುತ್ತೀರಿ. ಸೆಲೆಬ್ರಿಟಿಗಳು ಹೇಳಿಕೆಗಳನ್ನು ನೀಡುವಾಗ ತಮ್ಮ ನಾಲಿಗೆ ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎಂದು ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿತು.