ಬೆಂಗಳೂರು: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಲಂಚ ನೀಡಿರುವುದಾಗಿ ಏಳು ವರ್ಷಗಳ ಬಳಿಕ ಕೆಎಎಸ್ ಅಧಿಕಾರಿಯಬ್ಬರ ವಿರುದ್ಧ ದೂರು ದಾಖಲಿಸಿರುವುದು ದುರುದ್ದೇಶ ಪೂರ್ವಕವಾಗಿದ್ದು, ಸೇಡಿನ ಪ್ರತೀಕಾರ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್ ಪ್ರಕರಣವನ್ನು ರದ್ದುಪಡಿಸಿದೆ.
ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಕೋರಿ ಪ್ರಸ್ತುತ ಸಕಾಲ ಮಿಷನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿ ಎಲ್.ಸಿ.ನಾಗರಾಜ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ದೂರುದಾರರು ಏಳು ವರ್ಷಗಳಿಂದ ಈವರೆಗೂ ಸುಮ್ಮನಿದ್ದು, ಘಟನೆಗೆ ಕುರಿತು ಪ್ರತಿಯೊಂದು ಅಂಶವನ್ನು ನಿಖರವಾಗಿ ವಿವರಿಸಿದ್ದಾರೆ. ಸಾಕಷ್ಟು ಅವಕಾಶವಿದ್ದರೂ ಈವರೆಗೂ ದೂರು ನೀಡಿಲ್ಲ.
ನ್ಯಾಯಾಲಯ ಮತ್ತು ಅರೆ ನ್ಯಾಯಾಂಗ ಪ್ರಾಧಿಕಾರದ ಮುಂದೆ ಯಾವ ಕಾರಣಕ್ಕೆ ಹೋಗಿಲ್ಲ ಎಂಬುದಕ್ಕೆ ವಿವರಣೆ ನೀಡಿಲ್ಲ ಎಂದು ಅಭಿಪ್ರಾಯ ಪಟ್ಟು ಪ್ರಕರಣ ರದ್ದುಪಡಿಸಿದೆ. ಸುಪ್ರೀಂಕೋರ್ಟ್‌ನ ಪ್ರಕರಣವೊಂದನ್ನು ಉಲ್ಲೇಖಿಸಿರುವ ನ್ಯಾಯಪೀಠ, ದೂರು ನೀಡುವುದಕ್ಕೆ ಏಳು ವರ್ಷಗಳ ಬಳಿಕ ಮುಂದಾಗಿರುವ ಕ್ರಮ ದುರುದ್ದೇಶಪೂರಕವಾಗಿ ಕೂಡಿದೆ. 2016ರಿಂದ ಸುಮ್ಮನಿದ್ದು, ಇದೀಗ ಪ್ರಕರಣ ದಾಖಲಿಸಿರುವುದು ಸಂಶಯಕ್ಕೂ ಕಾರಣವಾಗಲಿದೆ. ಜತೆಗೆ, ಅಧಿಕಾರಿಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶವಿದೆ. ವೈಯಕ್ತಿಕ ದ್ವೇಷದಿಂದ ದೂರು ನೀಡಿರುವುದಾಗಿ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.