ಬೆಂಗಳೂರು: ಜಮೀನಿನ ಮೂಲ ಮಂಜೂರಾತಿದಾರರಿಂದ ಮಾರಾಟ ಮಾಡಿ ಏಳು ವರ್ಷಗಳ ಬಳಿಕ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲ ಜಮೀನುಗಳ ವರ್ಗಾವಣೆ, ಹಸ್ತಾಂತರ ನಿಷೇಧ) ಕಾಯಿದೆ (ಪಿಟಿಸಿಎಲ್) ಅಡಿಯಲ್ಲಿ ಮರುಸ್ಥಾಪನೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ರದ್ದುಪಡಿಸಿರುವ ಹೈಕೋರ್ಟ್, ಏಳು ವರ್ಷದ ಬಳಿಕ ಭೂ ಮಾಲೀಕರಿಗೆ ಪುನಸ್ಥಾಪನೆ ಕೋರಿ ಸಲ್ಲಿಸಿರುವುದು ಸಮಂಜಸವಲ್ಲದ ಪ್ರಕ್ರಿಯೆ ಎಂದು ತಿಳಿಸಿದೆ.
ಜಮೀನು ಖರೀದಿ ಮಾಡಿರುವ ಸುರೇಶ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಮಾಲೀಕ ಈರಪ್ಪ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಮತ್ತು ನ್ಯಾಯಮೂರ್ತಿ ವಿಜಯ್ ಕುಮಾರ್ ಎ. ಪಾಟೀಲ್ ಅವರಿದ್ದ ದ್ವಿಸದಸ್ಯ ಪೀಠ, ಜಮೀನು ಖರೀದಿದಾರರಿಗೆ ಮಂಜೂರು ಮಾಡಿ ಆದೇಶಿಸಿದೆ. ಅಲ್ಲದೇ, ಜಮೀನು ಮಾರಾಟ ಮಾಡಿರುವ ವ್ಯಕ್ತಿ ಏಳು ವರ್ಷಗಳ ಬಳಿಕ ಜಮೀನನ್ನು ಮರು ಮಂಜೂರು ಮಾಡುವಂತೆ ಕೋರಿದ್ದಾರೆ. ಈ ಅಂಶ ಸುಪ್ರೀಂ ಕೋರ್ಟ್ ನಕ್ಕಂಟಿ ರಾಜಲಕ್ಷ್ಮಿ ಪ್ರಕರಣದಲ್ಲಿ ತಿಳಿಸಿರುವಂತೆ ಸಮಂಜಸವಾದ ಸಮಯದ ನಿಯಮಕ್ಕೆ ವಿರುದ್ಧ ಎಂದು ಅಭಿಪ್ರಾಯಪಟ್ಟು ಮೇಲ್ಮನವಿ ಅರ್ಜಿ ವಜಾಗೊಳಿಸಿತು.
ಈ ಪ್ರಕರಣದಲ್ಲಿ ಜಮೀನು ಮಂಜೂರು ಮಾಡಿರುವ ವ್ಯಕ್ತಿಯೇ ಮಾರಾಟ ಮಾಡಿದ್ದಾರೆ. ಅಲ್ಲದೇ, ಅದೇ ಜಮೀನನ್ನು ಪುನರ್ಸ್ಥಾಪಿಸುವಂತೆ ಕೋರಿ ಏಳು ವರ್ಷಗಳ ಬಳಿಕ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಇದೊಂದು ಅವಿವೇಕದ ನಡೆ ಎಂದು ಪೀಠ ಹೇಳಿತು.
ಪ್ರಕರಣದ ಹಿನ್ನೆಲೆ:ಕೊಪ್ಪಳ ಜಿಲ್ಲೆಯ ಗಿಣಿಗೇರಾ ನಿವಾಸಿ ಈರಪ್ಪ ಎಂಬವರಿಗೆ ಬಡತನದ ಆಧಾರದಲ್ಲಿ 1978ರಲ್ಲಿ ಮೂರು ಎಕರೆ ಜಮೀನನ್ನು ಸರ್ಕಾರ ಮಂಜೂರು ಮಾಡಿತು. ಈ ಜಮೀನಿನಲ್ಲಿ ಅವರು ಮೂರು ಎಕರೆಯನ್ನು ಸುರೇಶ್ ಎಂಬವರಿಗೆ 2005ರಲ್ಲಿ ಮಾರಾಟ ಮಾಡಿದ್ದರು.
ಇದಾದ ಏಳು ವರ್ಷಗಳ ಬಳಿಕ ಪಿಟಿಸಿಎಲ್ ಕಾಯ್ದೆಯಡಿ ಜಮೀನು ಮರುಸ್ಥಾಪನೆ ಮಾಡುವಂತೆ ಕೋರಿ ಅರ್ಜಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು 2015ರಲ್ಲಿ ಜಮೀನನ್ನು ಮಾರಾಟ ಪ್ರಕ್ರಿಯೆಯನ್ನು ಪಿಟಿಸಿಎಲ್ ಕಾಯಿದೆಯ ನಿಯಮಗಳ ಉಲ್ಲಂಘನೆ ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸುರೇಶ್ ಜಿಲ್ಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಜಿಲ್ಲಾಧಿಕಾರಿಗಳು ರದ್ದುಪಡಿಸಿ ಆದೇಶಿಸಿದ್ದರು. ಜಿಲ್ಲಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ಸುರೇಶ್ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಏಕ ಸದಸ್ಯಪೀಠ ಜಿಲ್ಲಾಧಿಕಾರಿಗಳ ಅರ್ಜಿಯನ್ನು ರದ್ದುಪಡಿಸಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಈರಪ್ಪ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಜಮೀನು ಖರೀದಿ ಮಾಡಿರುವವರು ಅಡಮಾನ ಪತ್ರದ ಹೆಸರಿನಲ್ಲಿ ಮಾರಾಟ ಪತ್ರಕ್ಕೆ ಸಹಿ ಪಡೆದುಕೊಂಡು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದನ್ನು ತಳ್ಳಿ ಹಾಕಿರುವ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.
ಇದನ್ನೂಓದಿ:ಎಂಸಿಐ ನಿಯಮಗಳಂತೆ ಪ್ರಾಯೋಗಿಕ ಪರೀಕ್ಷೆ ನಡೆಸದ RGUHS: ಮರು ಪರೀಕ್ಷೆಗೆ ಹೈಕೋರ್ಟ್ ನಿರ್ದೇಶನ