ಕರ್ನಾಟಕ

karnataka

ETV Bharat / state

ಪೂಜೆ ವಿಚಾರದಲ್ಲಿ ದಂಪತಿ ನಡುವಿನ ಗಲಾಟೆಗೆ ಕ್ರಿಮಿನಲ್ ಬೆದರಿಕೆ ಅಡಿ ಆರೋಪ ಪಟ್ಟಿ: ಪ್ರಕರಣ ರದ್ದುಪಡಿಸಿದ ಹೈಕೋರ್ಟ್ - quarrel between couple

High Court: ದಂಪತಿ ನಡುವಿನ ಗಲಾಟೆ ಪ್ರಕರಣ ಸಂಬಂಧ ಸಲ್ಲಿಕೆಯಾಗಿದ್ದ ಆರೋಪ ಪಟ್ಟಿಯನ್ನು ಹೈಕೋರ್ಟ್​ ರದ್ದುಪಡಿಸಿದೆ.

high-court-quashed-charge-sheet-under-criminal-intimidation-for-quarrel-between-couple
ಪೂಜೆ ವಿಚಾರದಲ್ಲಿ ದಂಪತಿ ನಡುವಿನ ಗಲಾಟೆಗೆ ಕ್ರಿಮಿನಲ್ ಬೆದರಿಕೆ ಅಡಿ ಆರೋಪ ಪಟ್ಟಿ: ಪ್ರಕರಣ ರದ್ದುಪಡಿಸಿದ ಹೈಕೋರ್ಟ್

By ETV Bharat Karnataka Team

Published : Sep 15, 2023, 10:00 AM IST

ಬೆಂಗಳೂರು : ಮನೆಯಲ್ಲಿ ಪೂಜೆ ಮಾಡುವ ವಿಚಾರದಲ್ಲಿ ದಂಪತಿ ನಡುವಿನ ಗಲಾಟೆ ಪ್ರಕರಣದಲ್ಲಿ ಶಾಂತಿ ಭಂಗವನ್ನುಂಟುಮಾಡುವುದು ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಲ್ಲಿ ದಾಖಲಿಸಿದ್ದ ತನಿಖಾಧಿಕಾರಿಗಳ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್​​, ಪತಿ ವಿರುದ್ಧ ಪತ್ನಿ ದಾಖಲಿಸಿದ್ದ ಪ್ರಕರಣ ಮತ್ತು ಇದರ ಸಂಬಂಧ ಸಲ್ಲಿಕೆಯಾಗಿದ್ದ ಆರೋಪ ಪಟ್ಟಿ ರದ್ದುಪಡಿಸಿ ಆದೇಶಿಸಿದೆ.

ತನ್ನ ವಿರುದ್ಧ ಪತ್ನಿ ದಾಖಲಿಸಿದ್ದ ಪ್ರಕರಣ ಮತ್ತು ತನಿಖಾಧಿಕಾರಿಗಳು ಸಲ್ಲಿಸಿದ್ದ ಆರೋಪ ಪಟ್ಟಿ ರದ್ದುಪಡಿಸುವಂತೆ ಕೋರಿ ಬಾಗಲಕೋಟೆಯ ವಿದ್ಯಾಗಿರಿ ನಿವಾಸಿ ವಿವೇಕಾನಂದ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಧಾರವಾಡ ನ್ಯಾಯಪೀಠ ಈ ಆದೇಶ ಮಾಡಿದೆ.

ಅಲ್ಲದೆ, ತನಿಖಾಧಿಕಾರಿಗಳು ಪ್ರತಿಯೊಂದು ಪ್ರಕರಣದಲ್ಲಿ ಅಸಂಜ್ಞೆಯ ಅಪರಾಧಗಳಾದ ಐಪಿಸಿ ಸೆಕ್ಷನ್ 504(ಶಾಂತಿ ಭಂಗವನ್ನುಂಟು ಮಾಡುವುದಕ್ಕಾಗಿ ಉದ್ದೇಶ ಪೂರ್ವಕವಾಗಿ ಅವಮಾನ ಮಾಡುವುದು) ಮತ್ತು 506(ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಗಳನ್ನು ಸೇರಿಸುವುದು ಅಭ್ಯಾಸವಾಗಿ ಮಾಡಿಕೊಂಡಿದ್ದಾರೆ. ಆದರೂ, ಈ ಆರೋಪಗಳ ಪ್ರಕರಣವನ್ನು ಕೆಲವು ಸಂದರ್ಭಗಳಲ್ಲಿ ವಿಚಾರಣೆ ಮಾಡಬಹುದಾದ ಅಪರಾಧಗಳಾಗಿವೆ. ಹೀಗಾಗಿ ದಾಖಲಾಗುವ ಅಪರಾಧಗಳು ಪ್ರಸ್ತುತವಾಗಿವಿಯೇ ಎಂಬುದನ್ನು ಪರಿಶೀಲನೆ ಮಾಡಬೇಕಾಗುತ್ತದೆ ಎಂದು ಪೀಠ ತಿಳಿಸಿದೆ.

ಜೊತೆಗೆ, ಪ್ರಸ್ತುತದ ಪ್ರಕರಣವನ್ನು ಪರಿಶೀಲಿಸಿದಾಗ ದಂಪತಿ ನಡುವಿನ ಗಲಾಟೆಯಾಗಿದೆ. ಇದರಲ್ಲಿ ಸಾರ್ವಜನಿಕವಾಗಿ ಶಾಂತಿ ಭಂಗ ಮಾಡಿದ್ದಾರೆ ಎಂಬುದನ್ನು ಊಹೆ ಮಾಡಲು ಸಾಧ್ಯವೇ ಇಲ್ಲ. ಜತೆಗೆ, ಕ್ರಿಮಿನಲ್ ಬೆದರಿಕೆ ಸೇರಿಸಲಾಗಿದ್ದು, ಈ ಸೆಕ್ಷನ್‌ಗಳನ್ನು ಅಧಿಕಾರಿಗಳು ನಿರ್ಲಕ್ಷ್ಯದಿಂದ ಸೇರಿಸಿದ್ದು, ಅರ್ಜಿದಾರನ್ನು ವಿನಾಃಕಾರಣ ಹಲವು ಆರೋಪಗಳಲ್ಲಿ ಸಿಲುಕಿಸಲಾಗಿದೆ. ಈ ಆರೋಪಗಳಿಗೆ ಎರಡು ವರ್ಷಗಳವರೆಗೂ ಶಿಕ್ಷೆ ಅನುಭವಿಸಬೇಕಾಗುತ್ತದೆ. ಇಂತಹ ಆರೋಪಗಳನ್ನು ಅರ್ಜಿದಾರರ ವಿರುದ್ಧ ದಾಖಲಿಸಿರುವುದು ತಮಾಷೆಯಂತಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಈ ಪ್ರಕರಣದಲ್ಲಿ ಗಂಡ-ಹೆಂಡತಿಯ ನಡುವಿನ ಗಲಾಟೆಯನ್ನು ವೈಭವೀಕರಿಸಿ ಕ್ರಿಮಿನಲ್ ಆರೋಪಗಳನ್ನು ದಾಖಲಿಸಲಾಗಿರುವ ಅಂಶ ಗೊತ್ತಾಗಲಿದೆ. ಅಭಿಷೇಕ್ ಮತ್ತು ಮೊಹಮ್ಮದ್ ವಾಜಿದ್ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತಿಳಿಸಿರುವಂತೆ, ಇಂತಹ ಆರೋಪಗಳುಳ್ಳ ಪ್ರಕರಣವನ್ನು ಮುಂದುವರೆಸಿದಲ್ಲಿ ಕಾನೂನು ದುರ್ಬಳಕೆಯಾಗಲಿದೆ ಎಂಬುದಾಗಿ ಪೀಠ ತನ್ನ ಆದೇಶದಲ್ಲಿ ಹೇಳಿದೆ. ಅಲ್ಲದೆ, ಪ್ರಸ್ತುತದ ದಿನಗಳಲ್ಲಿ ಪ್ರಕರಣಗಳಲ್ಲಿ ಪತಿಯ ಕುಟುಂಬದವರನ್ನು ಎಳೆದು ತರುವುದು ವಾಡಿಕೆಯಾಗುತ್ತಿದೆ. ಹೀಗಾಗಿ ಪ್ರಕರಣವನ್ನು ರದ್ದುಪಡಿಸುತ್ತಿರುವುದಾಗಿ ನ್ಯಾಯಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ:ಅರ್ಜಿದಾರರಾದ ವಿವೇಕಾನಂದ ಮತ್ತು ಪ್ರಕರಣದಲ್ಲಿ ಎರಡನೇ ಪ್ರತಿವಾದಿಯಾಗಿರುವ ರೇಖಾ(ಅರ್ಜಿದಾರರ ಪತ್ನಿ) ಸುಮಾರು 15 ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗೆ 14 ವರ್ಷದ ಮಗನಿದ್ದಾನೆ. ಕೆಲ ಕಾರಣಗಳಿಂದ ಇಬ್ಬರ ನಡುವಿನ ಸಂಬಂಧ ಹದಗೆಟ್ಟಿತ್ತು. ಈ ನಡುವೆ 2016ರ ಆಗಸ್ಟ್ 25 ರಂದು ಶ್ರಾವಣ ಶುಕ್ರವಾರದಂದು ಪೂಜೆ ಮಾಡುವುದಕ್ಕೆ ಅಗತ್ಯ ವಸ್ತುಗಳನ್ನು ತರುವುದಕ್ಕೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದೇ ಕಾರಣದಿಂದ ಇಬ್ಬರ ನಡುವೆ ಗಲಾಟೆಯುಂಟಾಗಿತ್ತು. ಈ ಸಂಬಂಧ ರೇಖಾ ಅವರು ಪತಿಯ ವಿರುದ್ಧ ಬಾಗಲಕೋಟೆಯ ನವನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಅರ್ಜಿದಾರರ ವಿರುದ್ಧ ಮಾತ್ರ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಅಲ್ಲದೆ, ಇತರೆ ಆರೋಪಿಗಳು (ಅರ್ಜಿದಾರರ ಕುಟುಂಬ ಸದಸ್ಯರ ವಿರುದ್ದದ) ಆರೋಪಗಳನ್ನು ತನಿಖಾಧಿಕಾರಿಗಳು ಕೈಬಿಟ್ಟಿದ್ದರು. ಆರೋಪ ಪಟ್ಟಿ ಪರಿಗಣಿಸಿದ್ದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಕಾಗ್ನಿಜೆನ್ಸ್ ಪಡೆದುಕೊಂಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ABOUT THE AUTHOR

...view details