ಬೆಂಗಳೂರು :ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದಲ್ಲಿ ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ ಹಲವು ವರ್ಷಗಳ ನಂತರ ದೋಷಾರೋಪ ಪಟ್ಟಿ ಸಲ್ಲಿಸಿದ್ದ ಲೋಕಾಯುಕ್ತ ಪೊಲೀಸರ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರಕರಣವನ್ನು ರದ್ದುಪಡಿಸಿತು. ಜೊತೆಗೆ, ಅರ್ಜಿದಾರರನ್ನು ಖುಲಾಸೆಗೊಳಿಸಿದೆ.
ತಮ್ಮ ವಿರುದ್ದ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿ ಮತ್ತು ಈ ಸಂಬಂಧ ನಡೆಯುತ್ತಿರುವ ವಿಚಾರಣೆ ರದ್ದು ಕೋರಿ ಆರೋಪಿ ರಂಗಸ್ವಾಮಿ ಎಂಬವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ರಾಚಯ್ಯ ವಿಚಾರಣೆ ನಡೆಸಿದರು.
2006ರ ಜೂನ್ 8ರಂದು ಎಫ್‌ಐಆರ್ ದಾಖಲಿಸಿದ್ದ ಲೋಕಾಯುಕ್ತ ತನಿಖಾಧಿಕಾರಿಗಳು, ಸೋರ್ಸ್ ರಿಪೋರ್ಟ್ ಆಧರಿಸಿ ರಂಗಸ್ವಾಮಿ ಮೇಲೆ ದಾಳಿ ನಡೆಸಿ ತನಿಖೆ ನಡೆಸಿದ್ದರು. ಅದಾಗಿ ಹಲವು ವರ್ಷಗಳ ನಂತರ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆ ಮೂಲಕ ಪ್ರಾಸಿಕ್ಯೂಷನ್ (ತನಿಖಾಧಿಕಾರಿಗಳು) ವೈಫಲ್ಯ ಮುನ್ನೆಲೆಗೆ ಬಂದಿದೆ. ಮತ್ತೊಂದೆಡೆ, ರಂಗಸ್ವಾಮಿ ಅವರ ಕುಟುಂಬ ಸದಸ್ಯರ ಸ್ವತಂತ್ರ ಮೂಲಗಳ ಆದಾಯ ಪರಿಗಣಿಸಿಯೂ ಆರೋಪಗಳನ್ನು ಲೋಕಾಯುಕ್ತ ನ್ಯಾಯಾಲಯ ಕೈಬಿಟ್ಟಿದೆ. ಈ ಆದೇಶ ಸೂಕ್ತವಾಗಿದ್ದು, ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ :ರಂಗಸ್ವಾಮಿ 1977ರಲ್ಲಿ ರಾಜ್ಯ ಸರ್ಕಾರದ ಕೃಷಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ನೇಮಕಗೊಂಡಿದ್ದರು. 1981ರಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ವಾಣಿಜ್ಯ ತೆರಿಗೆ ಇನ್ಸ್ಪೆಕ್ಟರ್ ಆಗಿದ್ದರು. 1982ರಿಂದ 2006ರ ನಡುವಿನ ಸೇವಾವಧಿಯಲ್ಲಿ ಆದಾಯಕ್ಕೂ ಮೀರಿದ ಆಸ್ತಿಯನ್ನು ಗಳಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. 2006ರ ಜೂ.8ರಂದು ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಅದಾದ ಹಲವು ವರ್ಷಗಳ ನಂತರ ಅಂದರೆ, 2011ರ ಮಾರ್ಚ್ 10ರಂದು ವಿಚಾರಣಾ ನ್ಯಾಯಾಲಯಕ್ಕೆ ತನಿಖಾಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಇದರಿಂದ ತನ್ನ ವಿರುದ್ಧದ ಆರೋಪಗಳನ್ನು ಕೈ ಬಿಡುವಂತೆ ಕೋರಿ ರಂಗಸ್ವಾಮಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಪುರಸ್ಕರಿಸಿ ಲೋಕಾಯುಕ್ತ ನ್ಯಾಯಾಲಯ ಆದೇಶಿಸಿತ್ತು. ಲೋಕಾಯುಕ್ತ ಪೊಲೀಸರು 2013ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್‌ಗೆ ಹೊಸ ನ್ಯಾಯಮೂರ್ತಿ ಶಿಫಾರಸು: ವಕೀಲ ಕುರುಬರಹಳ್ಳಿ ವೆಂಕಟರಾಮರೆಡ್ಡಿ ಅರವಿಂದ್ ಅವರನ್ನು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಅರವಿಂದ್ ಅವರ ಹೆಸರನ್ನು ಹೈಕೋರ್ಟ್ ಶಿಫಾರಸು ಮಾಡಿತ್ತು. ಅರವಿಂದ್ 23 ವರ್ಷಗಳಿಂದ ವಕೀಲರಾಗಿದ್ದಾರೆ ಎಂದು ಕೊಲಿಜಿಯಂ ವಿವರಿಸಿದ್ದು, 567 ವರದಿಯಾಗಿರುವ ತೀರ್ಪುಗಳಲ್ಲಿ ವಾದಿಸಿದ್ದಾರೆ. ಇವರು ತೆರಿಗೆ ವಿಚಾರದಲ್ಲಿ ಸಾಕಷ್ಟು ಅನುಭವ ಪಡೆದಿದ್ದಾರೆ. ಕರ್ನಾಟಕ ಹೈಕೋರ್ಟ್‌ಗೆ ನಿರ್ದಿಷ್ಟ ಕ್ಷೇತ್ರದಲ್ಲಿ ತಜ್ಞತೆ ಇರುವವರ ಅಗತ್ಯವಿದೆ ಎಂದು ಹೇಳಲಾಗಿದೆ. ಕರ್ನಾಟಕ ಹೈಕೋರ್ಟ್ನಲ್ಲಿ ತೆರಿಗೆ ಪ್ರಕರಣಗಳು ಹೆಚ್ಚು ದಾಖಲಾಗುತ್ತಿದ್ದು, ಈ ನಿಟ್ಟಿನಲ್ಲಿ ತಜ್ಞ ನ್ಯಾಯಮೂರ್ತಿಗಳ ಅಗತ್ಯವಿದೆ ಎಂದು ಕೊಲಿಜಿಯಂ ತಿಳಿಸಿದೆ.
ಇದನ್ನೂ ಓದಿ :ಮನೆ ಖಾಲಿ ಮಾಡದೇ, ಬಾಡಿಗೆಯನ್ನೂ ಪಾವತಿಸದೇ ಮಾಲೀಕರ ವಿರುದ್ದ SC-ST ದೌರ್ಜನ್ಯ ಪ್ರಕರಣ ದಾಖಲು: ಕಾನೂನು ದುರ್ಬಳಕೆ ಎಂದ ಹೈಕೋರ್ಟ್