ಕರ್ನಾಟಕ

karnataka

ETV Bharat / state

ಶಾಸಕ ಸ್ಥಾನದಿಂದ ಜಮೀರ್ ಖಾನ್​ ಅನರ್ಹಗೊಳಿಸುವಂತೆ ಕೋರಿ ಅರ್ಜಿ: ವಿಚಾರಣೆ ಮುಂದೂಡಿದ ಹೈಕೋರ್ಟ್ - ಜಮೀರ್ ಖಾನ್​ ಅನರ್ಹ ಪ್ರಕರಣ ಮುಂದೂಡಿದ ಹೈಕೋರ್ಟ್

ಚುನಾವಣಾ ಅಕ್ರಮ ಆರೋಪದ ಮೇಲೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಜಮೀರ್ ಅಹ್ಮದ್ ಖಾನ್ ಅವರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್​ ಮುಂದೂಡಿದೆ.

ಹೈಕೋರ್ಟ್
ಹೈಕೋರ್ಟ್

By ETV Bharat Karnataka Team

Published : Sep 14, 2023, 9:02 PM IST

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ಉಚಿತ ಗ್ಯಾರಂಟಿಗಳ ಆಮಿಷವೊಡ್ಡಿ ಆ ಮೂಲಕ ಚುನಾವಣಾ ಅಕ್ರಮ ಎಸಗಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಜಮೀರ್ ಅಹ್ಮದ್ ಖಾನ್ ಅವರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಅಕ್ಟೋಬರ್ 5ಕ್ಕೆ ಮುಂದೂಡಿದೆ.

ಜಮೀರ್ ಅಹ್ಮದ್ ಆಯ್ಕೆ ಆಕ್ಷೇಪಿಸಿ ಚಾಮರಾಜಪೇಟೆ ನಿವಾಸಿ ಶಶಾಂಕ್ ಜೆ. ಶ್ರೀಧರ್ ಎಂಬುವರು ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಪೀಠದ ವಿಚಾರಣೆ ನಡೆಸಿತು. ಚುನಾವಣಾ ತಕರಾರು ಅರ್ಜಿಯ ಸಂಪೂರ್ಣ ಕಾಗದಗಳನ್ನು ಅವುಗಳ ಅಡಕಗಳೊಂದಿಗೆ ಪ್ರತಿವಾದಿಗಳ ಪರ ವಕೀಲರಿಗೆ ಸಲ್ಲಿಸಲು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿತು. ಇದೇ ವೇಳೆ, ಕೆಲವೊಂದು ಮಾಹಿತಿಗಳನ್ನು ಸಂಗ್ರಹಿಸಬೇಕಾಗಿದ್ದು, ಅದಕ್ಕೆ ಸಮಯ ಬೇಕು ಎಂದು ಶಾಸಕ ಜಮೀರ್ ಅಹ್ಮದ್ ಪರ ವಕೀಲರು ಕೋರಿದರು.
ವಿಚಾರಣೆಯನ್ನು ಅಕ್ಟೋಬರ್ 5ಕ್ಕೆ ಮುಂದೂಡಿದ ನ್ಯಾಯಪೀಠ, ಮುಂದಿನ ವಿಚಾರಣಾ ದಿನಾಂಕದೊಳಗೆ ಲಿಖಿತ ಆಕ್ಷೇಪಣಿಗಳನ್ನು ಸಲ್ಲಿಸುವಂತೆ ಪ್ರತಿವಾದಿಗಳ ಪರ ವಕೀಲರಿಗೆ ಸೂಚಿಸಿತು.

ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಯೋಜನೆಗಳ ಮೂಲಕ ಮತದಾರರಿಗೆ ಆಮಿಷವೊಡ್ಡಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಅದೇ ರೀತಿ ಜಮೀರ್ ಅಹ್ಮದ್ ಸಹ ಚಾಮರಾಜಪೇಟೆ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಇದು ಚುನಾವಣಾ ಅಕ್ರಮಕ್ಕೆ ಸಮಾನವಾಗಿದೆ. ಆದ್ದರಿಂದ, ಅವರ ಆಯ್ಕೆ ಅಸಿಂಧುಗೊಳಿಸಬೇಕು ಎಂದು ಅರ್ಜಿದಾರರು ವಾದಿಸಿದರು. ಅರ್ಜಿದಾರರ ಪರ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ವಾದ ಮಂಡಿಸಿದರು.

ಕಾಂಗ್ರೆಸ್‌ನಿಂದ ಗ್ಯಾರಂಟಿ ಕಾರ್ಡ್ ಯೋಜನೆಗಳ ಮೂಲಕ ಮತದಾರರಿಗೆ ಆಮಿಷ ವೊಡ್ಡಲಾಗಿದ್ದು, ಇದು ಲಂಚ ಹಾಗೂ ಭ್ರಷ್ಟಾಚಾರಕ್ಕೆ ಸಮವಾಗಿದೆ. ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ 123 (1) ಮತ್ತು ಸೆಕ್ಷನ್ 123 (2) ಪ್ರಕಾರ ಮತದಾರರ ಮೇಲೆ ಪ್ರಭಾವ ಬೀರುವ ಯತ್ನವಾಗಿದೆ. ಸೆಕ್ಷನ್ 123 (4)ರ ಪ್ರಕಾರ ಆಮಿಷವೊಡ್ಡಿ ಪ್ರಚಾರ ಮಾಡುವುದೂ ಅಪರಾಧವಾಗಿದೆ. ಈ ಯೋಜನೆಗಳು ಚಾಮರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತಹಾಕಲು ಮತದಾರರನ್ನು ಪ್ರೇರೇಪಿಸಿದೆ. ಮತದಾರರಿಗೆ ಆಮಿಷವೊಡ್ಡುವುದು ಪ್ರಜಾಪ್ರತಿನಿಧಿ ಕಾಯ್ದೆಯ ಅನ್ವಯ ಅಪರಾಧ ಹಾಗೂ ಚುನಾವಣಾ ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ಕಾಂಗ್ರೆಸ್ ಶಾಸಕರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ಐದು ಗ್ಯಾರಂಟಿಗಳಾದ ಶಕ್ತಿ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ ಮತ್ತು ಅನ್ನಭಾಗ್ಯ ಯೋಜನೆಗಳನ್ನು ಜಾರಿಗೊಳಿಸುವ ಬಗ್ಗೆ ಭರವಸೆ ನೀಡಿತ್ತು.

ಇದನ್ನೂ ಓದಿ: ನಟ ಗಣೇಶ್ ಕಟ್ಟಡ ನಿರ್ಮಾಣ ಪ್ರಕರಣ; ಕಾನೂನು ಪ್ರಕಾರ ವ್ಯವಸ್ಥೆ ನಡೆಯಬೇಕೇ ವಿನಃ ಜನರ ಪ್ರತಿಭಟನೆ ಅನ್ವಯವಲ್ಲ: ಹೈಕೋರ್ಟ್

ABOUT THE AUTHOR

...view details