ಕರ್ನಾಟಕ

karnataka

ETV Bharat / state

ಬಾಲಬ್ರೂಯಿ ಗೆಸ್ಟ್ ಹೌಸ್‌ನಲ್ಲಿ ಕಾನ್ಸ್​ಸ್ಟಿಟ್ಯೂಷನ್​ ಕ್ಲಬ್ ಸ್ಥಾಪನೆಗೆ ಹೈಕೋರ್ಟ್ ಅನುಮತಿ - ಸ್ಥಾಪನೆಗೆ ರಾಜ್ಯ ಹೈಕೋರ್ಟ್ ಅನುಮತಿ

ಬೆಂಗಳೂರಿನ ಪಾರಂಪರಿಕ ಕಟ್ಟಡಗಳಲ್ಲಿ ಒಂದಾಗಿರುವ ಬಾಲಬ್ರೂಯಿ ಅತಿಥಿಗೃಹದಲ್ಲಿ ಕಾನ್ಸ್​ಸ್ಟಿಟ್ಯೂಷನ್​ ಕ್ಲಬ್ ನಿರ್ಮಾಣಕ್ಕೆ ಈ ಹಿಂದೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದರು.

ಬಾಲಬ್ರೂಯಿ ಗೆಸ್ಟ್ ಹೌಸ್‌ನಲ್ಲಿ ಕಾನ್ಸ್​ಸ್ಟಿಟ್ಯೂಷನ್​ ಕ್ಲಬ್ ಸ್ಥಾಪನೆಗೆ ಹೈಕೋರ್ಟ್ ಅನುಮತಿ
high-court-permits-establishment-of-constitution-club-at-balabrui-guest-house

By

Published : Jan 17, 2023, 1:44 PM IST

Updated : Jan 17, 2023, 3:33 PM IST

ಬೆಂಗಳೂರು: ಸುಮಾರು 150 ರಿಂದ 200 ವರ್ಷಗಳ ಹಳೆಯ ಮರಗಳ ನಡುವೆ ಇರುವ ನಗರದ ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ ಬಾಲಬ್ರೂಯಿ ಅತಿಥಿ ಗೃಹವನ್ನು ಕಾನ್ಸ್​ಸ್ಟಿಟ್ಯೂಷನ್ ಕ್ಲಬ್ ಆಗಿ ಪರಿವರ್ತನೆ ಮಾಡುವುದಕ್ಕಾಗಿ ಹೈಕೋರ್ಟ್ ಅನುಮತಿ ನೀಡಿದೆ. ಅ ಮೂಲಕ ಬಾಲಬ್ರೂಯಿ ಅತಿಥಿ ಗೃಹವನ್ನು ಕಾನ್ಸ್​ಸ್ಟಿಟ್ಯೂಷನ್ ಕ್ಲಬ್ ಅನ್ನಾಗಿ ಪರಿವರ್ತಿಸುವ ನಿರ್ಧಾರ ಮತ್ತು ಅತಿಥಿ ಗೃಹದ ಆವರಣದಲ್ಲಿನ ಮರಗಳನ್ನು ಕಡಿಯುವುದರ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ 2021ರ ಅಕ್ಟೋಬರ್ 7 ರಂದು ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿದ್ದ ಆದೇಶವನ್ನು ಮಾರ್ಪಾಡು ಮಾಡಿದೆ.

ನಗರದ ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ ಬಾಲಬ್ರೂಯಿ ಅತಿಥಿ ಗೃಹವನ್ನು ಕಾನ್ಸ್​ಸ್ಟಿಟ್ಯೂಷನ್ ಕ್ಲಬ್ ಅನ್ನಾಗಿ ಬದಲಾಯಿಸುವುದಕ್ಕೆ ಸಂಬಂಧಿಸಿದಂತೆ ವಿಧಾನಸಭಾ ಅಧ್ಯಕ್ಷರು ಈ ಹಿಂದೆ ಪತ್ರಿಕಾಗೋಷ್ಟಿಯಲ್ಲಿ ಪ್ರಕಟಿಸಿದ್ದರು. ಇದನ್ನು ಪ್ರಶ್ನಿಸಿ ದತ್ತಾತ್ರೇಯ ಟಿ. ದೇವರು ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯ ಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಆಶೋಕ್ ಎಸ್.ಕಿಣಗಿ ಅವರಿದ್ದ, ವಿಭಾಗೀಯ ಪೀಠ, ಬಾಲಬ್ರೂಯಿ ಕಟ್ಟಡ ಮತ್ತು ಪುರಾತನ ಮರಗಳಿಗೆ ಹಾನಿಯಾಗದಂತೆ ಕಾನ್ಸ್​ಸ್ಟಿಟ್ಯೂಷನ್ ಕ್ಲಬ್ ಸ್ಥಾಪನೆ ಮಾಡಬಹುದು ಎಂದು ಸೂಚನೆ ನೀಡಿತು. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರಾದ ಪ್ರತಿಮಾ ಹೊನ್ನಾಪುರ, ಕಟ್ಟಡದ ಕುರಿತು ಯಥಾಸ್ಥಿತಿ ಕಾಯ್ದಕೊಳ್ಳುವಂತೆ ಈ ಹಿಂದೆ ನೀಡಿದ್ದ ಆದೇಶ ತೆರವು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದರು.

ಮರ ಕಡಿಯದಂತೆ ಕ್ರಮ: ಅಲ್ಲದೇ, ಅತಿಥಿ ಗೃಹದ ಪುನರ್ ನಿರ್ಮಾಣ, ಮರು ವಿನ್ಯಾಸ ಮತ್ತು ಕಟ್ಟಡ ಕೆಡವಬೇಕು ಎಂಬ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಕಟ್ಟಡದಲ್ಲಿ ಯಾವುದೇ ಮಾರ್ಪಾಡುಗಳನ್ನು ಮಾಡದೆ ಒಳಾಂಗಣದ ಸೌಂದರ್ಯ ಹೆಚ್ಚಳ ಮಾಡುವ ಪ್ರಸ್ತಾಪ ಇದೆ. ಜತೆಗೆ, ಈ ಕಟ್ಟಡವನ್ನು ಕಾನ್ಸ್ಟಿಟ್ಯೂಷನ್ ಕ್ಲಬ್‌ನ್ನಾಗಿ ಬಡಲಾಯಿಸುವ ಉದ್ದೇಶವಿದೆ.

ಕಟ್ಟಡದ ಆವರಣದಲ್ಲಿರುವ ಯಾವುದೇ ಮರಗಳನ್ನು ಕಡಿಯುವುದು, ಹಾನಿ ಮಾಡುವುದಕ್ಕೆ ಮುಂದಾಗುವುದಿಲ್ಲ ಎಂದು ಸರ್ಕಾರದ ಭರವಸೆ ನೀಡಿತು. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ, ಕಟ್ಟಡ ಮಾರ್ಪಾಡು ಮಾಡದಂತೆ ನಿರ್ವಹಣೆ ಮಾಡಬೇಕು. ಜತೆಗೆ, ಅತಿಥಿ ಗೃಹದ ಆವರಣದಲ್ಲಿ ಯಾವುದೇ ಮರಗಳನ್ನು ಕಡಿಯದೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿತು.

ಈ ವೇಳೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ, ಪ್ರಸನ್ನ ಬಾಲಚಂದ್ರ ವರಾಳೆ ಅವರು, ದೆಹಲಿಯ ಕಾನ್ಸ್​ಸ್ಟಿಟ್ಯೂಷನ್ ಕ್ಲಬ್ ನಲ್ಲಿ ಒಳ್ಳೆಯ ಲೈಬ್ರರಿ, ಉತ್ತಮ ಕಾಫಿ ಸಿಗುತ್ತದೆ. ಬೆಂಗಳೂರಿನಲ್ಲಿಯೂ ಅದೇ ರೀತಿಯ ವಾತಾವರಣ ನಿರ್ಮಿಸಿದರೆ ಉತ್ತಮ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ ವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲರು, ಬ್ರ್ರಿಟೀಷ್ ಆಡಳಿತದಲ್ಲಿ ಕಮಿಷನರ್ ಆಗಿದ್ದ ಮಾರ್ಕ್ ಕಬ್ಬನ್ ಎಂಬುವರು ಸುಮಾರು 14 ಎಕರೆ ಪ್ರದೇಶದಲ್ಲಿ ಬಾಲಬ್ರೂಯಿ ಅತಿಥಿ ಗೃಹವನ್ನು ನಿರ್ಮಿಸಿದ್ದರು. ಈ ಕಟ್ಟಡದ ಆವರಣದಲ್ಲಿರುವ 200 ವರ್ಷಗಳಿಗೂ ಹಳೆಯ ಮರಗಳ 40 ಅಡಿಗಳಷ್ಟು ಬೇರುಗಳನ್ನು ಹೊಂದಿದ್ದು, ಮಳೆ ನೀರನ್ನು ಸಂಗ್ರಹಿಸುತ್ತವೆ. ಅಲ್ಲದೇ, ರಾಷ್ಟ್ರಪಿತ ಮಹಾತ್ಮಾ ಗಾಂಧಿ, ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ, ರವೀಂದ್ರನಾಥ ಟ್ಯಾಗೂರ್ ಸೇರಿದಂತೆ ಹಲವು ಪ್ರಧಾನ ಮಂತ್ರಿಗಳು, ಮುಖ್ಯ ಮಂತ್ರಿಗಳು ತಂಗಿದ್ದ ಇತಿಹಾಸವಿದೆ. ಹೀಗಾಗಿ ಕಟ್ಟಡವನ್ನು ಪರಿವರ್ತನೆ ಮಾಡದಂತೆ ಕೋರಿದ್ದರು.

ಪರಿಸರವಾದಿಗಳಿಂದ ವಿರೋಧ: ಪಾರಂಪರಿಕ ಮೌಲ್ಯ ಹೊಂದಿರುವ ಬಾಲಬ್ರೂಯಿ ಕಟ್ಟಡದಲ್ಲಿ ಕಾನ್ಸ್ಟಿಟ್ಯೂಷನ್​ ಕ್ಲಬ್​ ನಿರ್ಮಿಸುವ ಸರ್ಕಾರದ ಪ್ರಸ್ತಾವಕ್ಕೆ ಈ ಹಿಂದೆ ಭಾರಿ ವಿರೋಧ ವ್ಯಕ್ತವಾಗಿತ್ತು. ಶತಮಾನಗಳಷ್ಟು ಹಳೆದಾದ ಮರಗಳು ಇಲ್ಲಿದ್ದು, ಅವು ದೊಡ್ಡ ಪ್ರಮಾಣದ ನೀರನ್ನು ಹೀರಿಕೊಳ್ಳುತ್ತವೆ. ಅಲ್ಲದೇ, ಈ ಅತಿಥಿಗೃಹ ಬೆಂಗಳೂರಿನಲ್ಲಿನ ಅತಿದೊಡ್ಡ ನೀರಿನ ಗೋಪುರವಾಗಿದೆ.

ಒಂದು ವೇಳೆ ಇಲ್ಲಿ ಕಾನ್ಸ್​ಸ್ಟಿಟ್ಯೂಷನ್ ಕ್ಲಬ್​ ನಿರ್ಮಿಸಲು ಅವಕಾಶ ನೀಡಿದರೆ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಮರಗಳನ್ನು ಕಡಿಯಬೇಕಾಗಬಹುದು. ಇದು ಅನೇಕ ಸಮಸ್ಯೆಗೆ ಕಾರಣವಾಗಲಿದೆ. ಬೆಂಗಳೂರಿನ ಪಾರಂಪರಿಕ ಕಟ್ಟಡಗಳ ರಕ್ಷಣೆ ಮಾಡಬೇಕು ಎಂದು ಪರಿಸರವಾದಿಗಳು ಮತ್ತು ಇತಿಹಾಸ ತಜ್ಞರು ವಿರೋಧಿಸಿದ್ದರು. ಈ ಹಿನ್ನೆಲೆಯಲ್ಲಿ ಬಾಲಬ್ರೂಹಿ ಅತಿಥಿ ಗೃಹವನ್ನು ಕಾನ್ಸ್ಟಿಟ್ಯೂಷನ್​ ಕ್ಲಬ್​ ನಿರ್ಮಾಣ ಮಾಡುವ ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್​ ತಡೆಯಾಜ್ಞೆ ನೀಡಿತ್ತು.

ಬಾಲಬ್ರೂಹಿ ಕಟ್ಟಡದ ಹಿನ್ನೆಲೆ: ಈ ಕಟ್ಟಡವನ್ನು 1850ರಲ್ಲಿ ನಿರ್ಮಾಣ ಮಾಡಲಾಗಿದೆ. 14 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಕಟ್ಟಡದಲ್ಲಿ ಸುಮಾರು 150 ವಿವಿಧ ಮರಗಳಿವೆ. ಆಗಿನ ಮೈಸೂರು ರಾಜ್ಯದಲ್ಲಿ ಸುದೀರ್ಘ ಕಾಲ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ಮಾರ್ಕ್​ ಕಬ್ಬನ್​ ನಿರ್ಮಿಸಿದ್ದನು.

ಏನಿದು ಕಾನ್ಸ್​ಸ್ಟಿಟ್ಯೂಷನ್​ ಕ್ಲಬ್?​: ಶಾಸಕರು ಮತ್ತು ಮಾಜಿ ಶಾಸಕರ ಮನರಂಜನಾ ಉದ್ದೇಶಕ್ಕಾಗಿ ನಿರ್ಮಾಣಗೊಳ್ಳುತ್ತಿರುವ ಕ್ಲಬ್​ ಇದಾಗಿದೆ. ಈ ಕಟ್ಟಡವನ್ನು ಕ್ಲಬ್​ ಮಾಡುವ ಪ್ರಸ್ತಾವವನ್ನು ಈ ಹಿಂದಿನ ಕಾಂಗ್ರೆಸ್​ ಸರ್ಕಾರ ಪ್ರಸ್ತಾಪಿಸಿತ್ತು. ಇದಕ್ಕೆ ವಿರೋಧ ವ್ಯಕ್ತವಾದ ಕಾರಣಕ್ಕೆ ಹಿಂದೆ ಸರಿಯಲಾಗಿತ್ತು. ಇದೀಗ ಬೊಮ್ಮಾಯಿ ಸರ್ಕಾರದಲ್ಲಿ ಮತ್ತೆ ವಿಧಾನ ಪರಿಷತ್​ ಸದಸ್ಯರೊಬ್ಬರು ಈ ಕ್ಲಬ್​ ಪ್ರಸ್ತಾವನೆ ಸಲ್ಲಿಸಿದ್ದರು.

ಈ ಕಟ್ಟಡ ವಿಧಾನಸೌಧಕ್ಕೆ ಹತ್ತಿರವಿರುವುದರಿಂದ ಇಲ್ಲಿ ಕ್ಲಬ್​ ನಿರ್ಮಾಣ ಮಾಡುವುದರಿಂದ ಶಾಸಕರು ಮತ್ತು ಮಾಜಿ ಶಾಸಕರು ಬಂದು ಹೋಗುವುದಕ್ಕೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಈ ಕಟ್ಟಡ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಬಿಜೆಪಿಯ ಶಾಸಕರಲ್ಲೇ ಕೆಸರೆರಚಾಟ ಆರಂಭ: ಹೆಚ್.​ಡಿ.ಕುಮಾರಸ್ವಾಮಿ

Last Updated : Jan 17, 2023, 3:33 PM IST

ABOUT THE AUTHOR

...view details