ಬೆಂಗಳೂರು :ನಗರ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಅಕ್ರಮ ಕಟ್ಟಡಗಳನ್ನು ಸರ್ವೆ ಮಾಡುವಲ್ಲಿ ವಿಳಂಬ ಮಾಡುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರ ವಿರುದ್ಧ ಹೈಕೋರ್ಟ್ ಚಾಟಿ ಬೀಸಿದೆ.
ನಗರದಲ್ಲಿರುವ ಅಕ್ರಮ ಕಟ್ಟಡಗಳ ತೆರವು ಸಂಬಂಧ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು ವಾದಿಸಿ, ಬಿಬಿಎಂಪಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಸರ್ವೆ ಕಾರ್ಯ ತಡ ಮಾಡುವಂತೆ ಕಾಣುತ್ತಿದೆ. ಈ ಹಿಂದೆಯೂ ಅಕ್ರಮ ಕಟ್ಟಡಗಳ ತೆರವು ವಿಚಾರದಲ್ಲಿ ಕಠಿಣ ಕ್ರಮಗಳನ್ನು ಅನುಸರಿಸಿರಲಿಲ್ಲ ಎಂದು ಆರೋಪಿಸಿದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಹೈಕೋರ್ಟ್ ನಿರ್ದೇಶನ ನೀಡಿದ ಬಳಿಕವೂ ಸರ್ವೆ ಕಾರ್ಯ ಆರಂಭಿಸಿಲ್ಲ ಎಂದರೆ ಏನರ್ಥ?. ಇಂತಹ ಅಧಿಕಾರಿಗಳನ್ನು ಇನ್ನೂ ಸಹಿಸಲು ಸಾಧ್ಯವೇ ಇಲ್ಲ. ಇವರ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ದಾಖಲಿಸಬಾರದು ಎಂದು ಪ್ರಶ್ನಿಸಿತು.
ಬಿಬಿಎಂಪಿ ಆಯುಕ್ತ ಅನಿಲ್‌ಕುಮಾರ್ ವಿರುದ್ಧ ಸಿವಿಲ್ ನ್ಯಾಯಾಂಗ ನಿಂದನೆ ದಾಖಲಿಸುವ ವಿಚಾರವಾಗಿ ಶೋಕಾಸ್ ನೋಟಿಸ್ ಜಾರಿ ಮಾಡಲು ನ್ಯಾಯಾಲಯದ ಅಧಿಕಾರಿಗಳಿಗೆ ಆದೇಶಿಸಿತು. ಜೊತೆಗೆ ಬಿಬಿಎಂಪಿ ಬೇಡಿಕೆ ಇಟ್ಟಿರುವ ಅಗತ್ಯ ಸಿಬ್ಬಂದಿ ನೇಮಕ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.