ಕರ್ನಾಟಕ

karnataka

ETV Bharat / state

ತುಮಕೂರು ನಗರ ಪಾಲಿಕೆ ಪೌರ ಕಾರ್ಮಿಕರ ಕಾಯಂಗೊಳಿಸಲು ಹೈಕೋರ್ಟ್ ಆದೇಶ

ತುಮಕೂರು ನಗರ ಪಾಲಿಕೆಯಲ್ಲಿ ಗುತ್ತಿಗೆದಾರರು ಬದಲಾದರೂ ಪೌರಕಾರ್ಮಿಕರು ಬದಲಾಗಿಲ್ಲ. ಅವರ ಹಿತಾಸಕ್ತಿ ಹಾಗೂ ಹಕ್ಕುಗಳನ್ನು ನ್ಯಾಯಾಲಯ ರಕ್ಷಣೆ ಮಾಡಬೇಕಿದೆ. ಕಡಿಮೆ ಸಂಬಳ ನೀಡುವ ಕುತಂತ್ರದಿಂದ ಪೌರಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಕೊಳ್ಳಲಾಗಿದೆ ಎಂದು ಪಾಲಿಕೆಯ ನಡೆಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

By

Published : Dec 12, 2022, 5:59 PM IST

high-court-orders-to-make-tumkur-city-corporation-civic-workers-permanent
ತುಮಕೂರು ನಗರ ಪಾಲಿಕೆ ಪೌರಕಾರ್ಮಿಕರ ಕಾಯಂಗೊಳಿಸಲು ಹೈಕೋರ್ಟ್ ಆದೇಶ

ಬೆಂಗಳೂರು:ತುಮಕೂರು ನಗರ ಪಾಲಿಕೆಯಲ್ಲಿ ದಿನಗೂಲಿ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ 250 ಪೌರಕಾರ್ಮಿಕರ ಸೇವೆ ಕಾಯಂಗೊಳಿಸಲು ಹೈಕೋರ್ಟ್ ಆದೇಶ ನೀಡಿದೆ. ಆ ಮೂಲಕ ಕಳೆದ 20 ವರ್ಷಗಳ ಕಾನೂನು ಸಮರಕ್ಕೆ ಅ೦ತಿಮ ತೆರೆ ಎಳೆದಿದೆ.

ಅಲ್ಲದೆ, ಮುಂದಿನ ತುಮಕೂರು ನಗರ ಪಾಲಿಕೆಯು (ಹಿ೦ದಿನ ನಗರಸಭೆ) ಪ್ರಕರಣದಲ್ಲಿ ವ್ಯಾಜ್ಯದಾರರಾದ 260 ಪೌರಕಾರ್ಮಿಕರ ಸೇವೆಯನ್ನು ಅವರು ಕೆಲಸಕ್ಕೆ ಸೇರಿದ ದಿನಾಂಕದಿಂದ ಪೂರ್ವಾನ್ವಯ ಆಗುವಂತೆ ಕಾಯಂಗೊಳಿಸಬೇಕು. ಅವರ ಕೆಲಸಕ್ಕೆ ಸಮಾನ ವೇತನ ಹಾಗೂ ಹಿಂಬಾಕಿ ಪಾವತಿಸಬೇಕು. ಅಲ್ಲದೆ, ಎಲ್ಲ ಶಾಸನಬದ್ಧ ಸೌಲಭ್ಯ ಕಲ್ಪಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ತುಮಕೂರು ನಗರ ಪಾಲಿಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರ ನ್ಯಾಯಪೀಠ ಈ ಆದೇಶ ಮಾಡಿದೆ. ನಗರ ಪಾಲಿಕೆಯಲ್ಲಿ 20 ವರ್ಷಗಳಿಂದ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ 20 ವರ್ಷವನ್ನು ತಾತ್ಕಾಲಿಕ ಸಮಯ ಎಂದು ಪರಿಗಣಿಸಲಾಗದು.

ಗುತ್ತಿಗೆದಾರರು ಬದಲಾದರೂ ಪೌರಕಾರ್ಮಿಕರು ಬದಲಾಗಿಲ್ಲ. ಅವರ ಹಿತಾಸಕ್ತಿ ಹಾಗೂ ಹಕ್ಕುಗಳನ್ನು ನ್ಯಾಯಾಲಯ ರಕ್ಷಣೆ ಮಾಡಬೇಕಿದೆ. ಕಡಿಮೆ ಸಂಬಳ ನೀಡುವ ಕುತಂತ್ರದಿಂದ ಪೌರಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಕೊಳ್ಳಲಾಗಿದೆ ಎಂದು ಪಾಲಿಕೆಯ ನಡೆಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. 2002ರ ವೇಳೆಗೆ ತುಮಕೂರು ನಗರಸಭೆಯಲ್ಲಿ 250 ಪೌರ ಕಾರ್ಮಿಕರು ದಿನಗೂಲಿ ಆಧಾರದಲ್ಲಿ ದುಡಿಯುತ್ತಿದ್ದರು. ಸೇವೆ ಕಾಯಂಗೊಳಿಸಲು ಕೋರಿ ನಗರಸಭೆ ಪೌರಕಾರ್ಮಿಕರ ಸಂಘ ಸಲ್ಲಿಸಿದ್ದ ಮನವಿಯನ್ನು ಸರ್ಕಾರ 2002ರ ನವೆಂಬರ್‌ನಲ್ಲಿ ಕೈಗಾರಿಕಾ ನ್ಯಾಯಾಧಿಕರಣಕ್ಕೆ ಶಿಫಾರಸು ಮಾಡಿತ್ತು.

ಪ್ರಾರಂಭದಲ್ಲಿ ಪೌರಕಾರ್ಮಿಕರು ಸೇವೆ ಕಾಯಂಗೆ ಅರ್ಹರಲ್ಲ ಎಂದು ನ್ಯಾಯಾಧಿಕರಣ 2006ರ ಜು. 4ರಂದು ಆದೇಶಿಸಿತ್ತು. ಈ ಆದೇಶ ಸಲ್ಲಿಸಿದ್ದ ಪೌರಕಾರ್ಮಿಕರ ಸಂಘದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ 2006ರಲ್ಲಿ ವಜಾಗೊಳಿಸಿತ್ತು. ಆದರೆ, ಸಂಘದ ಮೇಲ್ಮನವಿಯನ್ನು ಮತ್ತೊಮ್ಮೆ ಪರಿಶೀಲಿಸುವಂತೆ ನ್ಯಾಯಾಧಿಕರಣಕ್ಕೆ ಹಿಂದಿರುಗಿಸಿತ್ತು.

ಇದರಿ೦ದ ಮತ್ತೆ ಹೊಸದಾಗಿ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ 2018ರ ಸೆ. 26ರಂದು ದಿನಗೂಲಿ ನೌಕರರ ಸೇವೆ ಕಾಯಂಗೊಳಿಸದೇ ಕೆಲಸ ಮಾಡಿಸಿಕೊಳ್ಳುತ್ತಿರುವುದು, ಸಮಾನ ಕೆಲಸಕ್ಕೆ ಸಮಾನ ವೇತನ ಪಾವತಿಸದಿರುವುದು, ಪೌರಕಾರ್ಮಿಕರಿಗೆ ಪ್ರತಿ ವರ್ಷ ಸಮವಸ್ತ್ರಪಾದ ರಕ್ಷೆ, ಸುರಕ್ಷಿತ ಕವಚ ನೀಡದಿರುವುದು ನಿಯಮಬಾಹಿರವಾಗಿದೆ. ಆದ್ದರಿಂದ ಅವರನ್ನು ನೌಕರಿಗೆ ಸೇರಿದ ದಿನದಿ೦ದ ಪೂರ್ವಾನ್ವಯವಾಗುವಂತೆ ಕಾಯಂಗೊಳಿಸಬೇಕು ಎಂದು ಆದೇಶಿಸಿತ್ತು.

ಉದ್ಯೋಗಕ್ಕೆ ಸಮಾನ ವೇತನ, ಹಿಂಬಾಕಿ, ಎಲ್ಲ ಶಾಸನಬದ್ಧ ಪ್ರಯೋಜನ, ಸೌಲಭ್ಯ ಹಾಗೂ ಪರಿಹಾರ ನೀಡಬೇಕು. ಗ್ಲೌಸ್, ಶೂ, ಸಮವಸ್ತ್ರ, ಜಾಕೆಟ್ ಹಾಗೂ ಹೆಲೈಟ್ ಸೇರಿದಂತೆ ಸುರಕ್ಷಿತ ಸಾಮಗ್ರಿ ಒದಗಿಸಬೇಕು. ನಿವೃತ್ತಿಯಾದ ಕಾರ್ಮಿಕನಿಗೆ ಎಲ್ಲ ಹಣಕಾಸು ಪ್ರಯೋಜನ ಕಲ್ಪಿಸಬೇಕು ಎಂದು ನಿರ್ದೇಶಿಸಿತ್ತು.

ಈ ಆದೇಶ ಪ್ರಶ್ನಿಸಿ 2018ರಲ್ಲಿ ತುಮಕೂರು ಪಾಲಿಕೆ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿತ್ತು. ಆ ಅರ್ಜಿಯನ್ನು ಇದೀಗ ವಜಾಗೊಳಿಸಿರುವ ಹೈಕೋರ್ಟ್, ನ್ಯಾಯಾಧೀಕರಣದ ಆದೇಶ ಜಾರಿಗೆ ಪಾಲಿಕೆಗೆ 3 ತಿಂಗಳು ಗಡುವು ನೀಡಿದೆ.

ಇದನ್ನೂ ಓದಿ:ಹೈಕೋರ್ಟ್​ ಶಾಶ್ವತ ಪೀಠಕ್ಕೆ ಆಗ್ರಹಿಸಿ ವಕೀಲರಿಂದ ಪ್ರತಿಭಟನೆ

ABOUT THE AUTHOR

...view details