ಬೆಂಗಳೂರು :ಶಿವಮೊಗ್ಗದ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನ ಒತ್ತುವರಿ ಮಾಡಿರುವ ಅರಣ್ಯ ಭೂಮಿಯನ್ನು ಸ್ವಯಂ ಪ್ರೇರಿತವಾಗಿ ಸರ್ಕಾರಕ್ಕೆ ಬಿಟ್ಟು ಕೊಡುವಂತೆ ಹೈಕೋರ್ಟ್ ದೇವಸ್ಥಾನದ ಆಡಳಿತ ಮಂಡಳಿಗೆ ನಿರ್ದೇಶಿಸಿದೆ.
ಅರಣ್ಯ ಭೂಮಿಯನ್ನು ದೇವಸ್ಥಾನ ಒತ್ತುವರಿ ಮಾಡಿರುವ ಕುರಿತು ಸಾಗರ ತಾಲೂಕಿನ ಲಕ್ಷ್ಮಿನಾರಾಯಣ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಮಾಹಿತಿ ನೀಡಿ, ಈ ಹಿಂದೆಯೇ ಸರ್ಕಾರಿ ಜಾಗ ತೆರವು ಮಾಡುವಂತೆ ಆದೇಶಿಸಲಾಗಿದೆ. ಇದರಲ್ಲಿ ಹಿಂದೆ ಸರಿಯುವ ಮಾತಿಲ್ಲ ಎಂದು ಭರವಸೆ ನೀಡಿದರು.
ದೇವಸ್ಥಾನದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ನ್ಯಾಯಾಲಯದ ಹಿಂದಿನ ಸೂಚನೆಯಂತೆ ದೇವಸ್ಥಾನ, ಕಲ್ಯಾಣ ಮಂಟಪ ಹಾಗೂ ಇತರೆ ಕಟ್ಟಡಗಳಿರುವ ಜಾಗ ಬಿಟ್ಟು ಉಳಿದ ಜಾಗವನ್ನು ಕೂಡಲೇ ಬಿಟ್ಟುಕೊಡಲು ದೇವಾಲಯದ ಆಡಳಿತ ಮಂಡಳಿ ಸಿದ್ಧವಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ 6 ಎಕರೆ 16 ಗುಂಟೆ ಜಾಗವನ್ನು ಕೂಡಲೇ ಸಾಗರ ತಹಶೀಲ್ದಾರ್ ವಶಕ್ಕೆ ನೀಡಬೇಕು. ಅಧಿಕಾರಿ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆದು ಸುತ್ತಲೂ ತಂತಿ ಬೇಲಿ ನಿರ್ಮಿಸಲು ಕ್ರಮಕೈಗೊಳ್ಳಬೇಕು ಎಂದು ನಿರ್ದೇಶಿಸಿತು.
ಇದೇ ವೇಳೆ ಖಾಲಿ ಜಾಗ ಬಿಟ್ಟುಕೊಟ್ಟಾಕ್ಷಣ ದೇವಸ್ಥಾನದ ಜಾಗ ಸಕ್ರಮವಾದಂತಲ್ಲ. ಈ ಕುರಿತು ಮುಂದಿನ ವಿಚಾರಣೆ ವೇಳೆ ನಿರ್ಧರಿಸಲಾಗುವುದು ಎಂದು ಸ್ಪಷ್ಟಪಡಿಸಿತು. ಹಿಂದಿನ ವಿಚಾರಣೆ ವೇಳೆ ದೇವಸ್ಥಾನದ ಪರ ವಕೀಲರು ವಾದಿಸಿ, ಜಿಲ್ಲಾಡಳಿತ ನೀಡಿರುವ ವರದಿಯಂತೆ 12.16 ಎಕರೆಯಲ್ಲೂ ದೇವಸ್ಥಾನವಿಲ್ಲ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಪೀಠ ದೇವಸ್ಥಾನ ಹಾಗೂ ಕಟ್ಟಡಗಳಿರುವ ಜಾಗ ಬಿಟ್ಟು ಉಳಿದ ಜಾಗ ತಕ್ಷಣವೇ ಬಿಟ್ಟುಕೊಡುವ ಬಗ್ಗೆ ನಿಲುವು ತಿಳಿಸಿ ಎಂದು ಸೂಚಿಸಿತ್ತು. ಅದರಂತೆ, ದೇವಸ್ಥಾನ ಇಂದು ತಕ್ಷಣವೇ ಖಾಲಿ ಜಾಗ ಬಿಟ್ಟುಕೊಡುವುದಾಗಿ ತಿಳಿಸಿದೆ.
ಇದನ್ನೂ ಓದಿ:ಮೊದಲು ಬಡವರಿಗೆ ಕೋವಿಡ್ ಲಸಿಕೆ ತಲುಪಿಸಿ; ಹೈಕೋರ್ಟ್ ಸೂಚನೆ
ಪ್ರಕರಣದ ಹಿನ್ನೆಲೆ: ಶಿವಮೊಗ್ಗದ ಸಾಗರ ತಾಲೂಕಿನ ಕಳಸವಳ್ಳಿ ಗ್ರಾಮದ ಸರ್ವೇ ನಂಬರ್ 65ರಲ್ಲಿನ ಸರ್ಕಾರಿ ಅರಣ್ಯ ಭೂಮಿಯನ್ನು ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಹೆಸರಿನಲ್ಲಿ ಒತ್ತುವರಿ ಮಾಡಲಾಗಿದೆ.
ಒತ್ತುವರಿಯಾಗಿರುವ ಅರಣ್ಯ ಭೂಮಿಯನ್ನು ತೆರವು ಮಾಡಲು ಜಿಲ್ಲಾಡಳಿತ ಕ್ರಮಕೈಗೊಂಡಿಲ್ಲ. ದೇವಾಲಯ ಭಕ್ತರಿಂದ ಸಾವಿರಾರು ಕೋಟಿ ರೂ. ಹಣ ಸಂಗ್ರಹಿಸಿದ್ದರೂ, ವಾರ್ಷಿಕ ಐದು ಕೋಟಿ ಮಾತ್ರ ಲೆಕ್ಕ ತೋರಿಸಿದ್ದಾರೆ.
ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಒತ್ತುವರಿಯಾಗಿರುವ ಅರಣ್ಯ ಭೂಮಿ ತೆರವುಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಹಾಗೂ ದೇವಸ್ಥಾನವನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವಂತೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ವಿಚಾರಣೆ ವೇಳೆ ಜಿಲ್ಲಾಡಳಿತ ಗ್ರಾಮದ ಸರ್ವೆ ನಂಂಬರ್ 65ರಲ್ಲಿ 12.16 ಎಕರೆ ಒತ್ತುವರಿ ಮಾಡಿದೆ ಎಂದು ಸ್ಪಷ್ಟಪಡಿಸಿತ್ತು.