ಬೆಂಗಳೂರು: ಕಳೆದ ನವೆಂಬರ್ ತಿಂಗಳಲ್ಲಿ ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ರಾಜ್ಯ ಸರ್ಕಾರದಿಂದ ಹಮ್ಮಿಕೊಂಡಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ(ಜಿಮ್)ದ ಪ್ರಚಾರಕ್ಕಾಗಿ 5 ನಿಮಿಷದ ವಿಡಿಯೋ ಸಿದ್ದಪಡಿಸುವುದಕ್ಕೆ ಬಿಬಿಪಿ ಸ್ಟುಡಿಯೋಗೆ ನೀಡಿದ್ದ ಕಾರ್ಯಾದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದ್ದ ಕ್ರಮವನ್ನು ರದ್ದು ಪಡಿಸಿರುವ ಹೈಕೋರ್ಟ್, ಒಪ್ಪಂದದಂತೆ ಸಂಸ್ಥೆಗೆ 4.5 ಕೋಟಿ ರೂ. ಮೊತ್ತ ಪಾವತಿಸಲು ಸೂಚಿಸಿದೆ.
ಸಮಾವೇಶಕ್ಕೆ ಸಂಬಂಧಿಸಿದಂತೆ ಮುಂಬೈ ಮೂಲಕ ಬಿಬಿಪಿ ಸ್ಟುಡಿಯೋಗೆ ತ್ರೀಡಿ ತಂತ್ರಜ್ಞಾನದ ಪ್ರಚಾರ ವಿಡಿಯೋ ಸಿದ್ದಪಡಿಸಲು ರಾಜ್ಯ ಸರ್ಕಾರದ ಅಧೀನದ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ನಿಂದ ಗುತ್ತಿಗೆ ನೀಡಲಾಗಿತ್ತು. ಅದರಂತೆ ಕಾರ್ಯಾದೇಶ ನೀಡಿ, ಬಳಿಕ ರದ್ದು ಪಡಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಬಿಬಿಪಿ ಸ್ಟೂಡಿಯೋ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಸರ್ಕಾರ ನೀಡಿದ್ದ ಕಾರ್ಯಾದೇಶ ಹಿಂಪಡೆದು ಹೊರಡಿಸಿದ್ದ ಆದೇಶವನ್ನು ರದ್ದು ಮಾಡಿದೆ. ಅಲ್ಲದೆ, ಒಪ್ಪಂದಂತೆ ಬಿಬಿಪಿ ಸಂಸ್ಥೆಯೆ ಜಾಹೀರಾತು ಮೊತ್ತು 4.5 ಕೋಟಿ ರೂ.ಗಳನ್ನು ಪಾವತಿಸುವಂತೆ ಸೂಚನೆ ನೀಡಿದೆ.
ಅಲ್ಲದೇ, ಅರ್ಜಿದಾರ ಸಂಸ್ಥೆಗೆ ನೀಡಿದ್ದ ಗುತ್ತಿಗೆಯ ಒಪ್ಪಂದದಂತೆ ವಿಡಿಯೋ ಚಿತ್ರೀಕರಣ ಮಾಡುವ ಪ್ರಕ್ರಿಯೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗಿದೆ. ಆದರೆ, ಅದು ಪ್ರದರ್ಶನಕ್ಕೂ ಮುನ್ನ ಕಾರ್ಯಾದೇಶ ಹಿಂಪಡೆದಿರುವ ಸರ್ಕಾರದ ಕ್ರಮ ನಿರಂಕುಶ ನಡೆಯಾಗಿದೆ. ಅಲ್ಲದೇ, ಪ್ರಸಾರ ವಿಡಿಯೋದ ಗುಣಮಟ್ಟ ಮತ್ತು ಅರ್ಹತೆಯನ್ನು ಪರಿಗಣಿಸದೇ ರಾಜಕೀಯ ಹಸ್ತಕ್ಷೇಪದಿಂದ ರದ್ದು ಮಾಡಲಾಗಿದೆ.
ಈ ಪ್ರಕರಣದ ನಿರಂಕುಶತ್ವ ಎತ್ತಿತೋರಿಸುವ ದೊಡ್ಡ ಉದಾಹರಣೆಯಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ. ಅಲ್ಲದೇ, ಪ್ರಚಾರ ವಿಡಿಯೋ ಸಿದ್ದ ಪಡಿಸಲು ಮುಂಗಡವಾಗಿ ನೀಡಿದ್ದ 1.5 ಕೋಟಿ ರೂ.ಗಳ ಹೊರತು ಪಡಿಸಿ ಇನ್ನುಳಿದ ಬಾಕಿ ಮೊತ್ತವನ್ನು ಪಾವತಿ ಮಾಡಬೇಕು ಎಂದು ಸೂಚನೆ ನೀಡಿದೆ. ಸಂವಿಧಾನದ ಪರಿಚ್ಚೇದ 14 ಚಿನ್ನದ ಬಟ್ಟೆಯ ಮೂಲಕ ನೇಯ್ದ ದಾರವಾಗಿದೆ. ಸರ್ಕಾರಗಳು ಈ ಪರಿಚ್ಚೇದದ ಆಧಾರದಲ್ಲಿಯೇ ಕ್ರಮ ಕೈಗೊಳ್ಳಬೇಕಾಗುತ್ತದೆ. ಹೀಗಾಗಿ ಸರ್ಕಾರ ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಪೀಠ, ಪ್ರಕರಣವನ್ನು ಸಿವಿಲ್ ನ್ಯಾಯಾಲಯಕ್ಕೆ ವರ್ಗಾವಣೆ ಮಾಡದೆ ಪರಿಹಾರ ನೀಡಲು ಸೂಚನೆ ನೀಡಿದೆ.
ಪ್ರಕರಣದ ಹಿನ್ನೆಲೆ :ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪ್ರಚಾರಕ್ಕಾಗಿ 5 ವಿಡಿಯೋ ಚಿತ್ರೀಕರಣಕ್ಕಾಗಿ 2022ರ ಜೂನ್ ತಿಂಗಳಲ್ಲಿ ಟೆಂಡರ್ ಕರೆಯಲಾಗಿತ್ತು. ಸುಮಾರು 3.9 ಕೋಟಿ ರೂ. ಮತ್ತು ತೆರಿಗೆಯೊಂದಿಗೆ ಟೆಂಡರ್ ಮುಂಬೈ ಮೂಲದ ಬಿಬಿಪಿ ಪಾಲಾಗಿತ್ತು. ಅದರಂತೆ 2022ರ ಆಗಸ್ಟ್ 11ರಂದು ವಿಡಿಯೋ ಚಿತ್ರೀಕರಣಕ್ಕೆ ಕಾರ್ಯಾದೇಶ ನೀಡಲಾಗಿತ್ತು. ಜತೆಗೆ, 2022ರ ಅಕ್ಟೋಬರ್ 1 ರಂದು 1.5 ಕೋಟಿ ರೂ. ಹಣ ಮುಂಗಡವಾಗಿ ಪಾವತಿಸಿ ಒಪ್ಪಂದಕ್ಕೆ ಸಹಿ ಮಾಡಿಕೊಳ್ಳಲಾಗಿತ್ತು. ಆದರೆ, 2022 ಅಕ್ಟೋಬರ್ 24ರಂದು 5 ನಿಮಿಷದ ಪ್ರಚಾರಕ್ಕೆ 4.5 ಕೋಟಿ ರೂ.ಗಳು ದೊಡ್ಡ ಪ್ರಮಾಣದ ಹಣ ನೀಡುವುದು ಅಗತ್ಯವಿಲ್ಲ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪತ್ರ ಬರೆದಿದ್ದರು. ಪತ್ರವನ್ನು ಆಧರಿಸಿ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್(ಎಂಸಿಎಲ್‌ಎ)ಗೆ ಅಕ್ಟೋಬರ್ 25ರಂದು ಕಾರ್ಯಾದೇಶನ್ನು ರದ್ದು ಮಾಡುತ್ತಿರುವುದಾಗಿ ಇ-ಮೇಲ್ ಮೂಲಕ ಸಂದೇಶ ರವಾನಿಸಿತ್ತು.
ಈ ನಡುವೆ ಅರ್ಜಿದಾರರು 2022ರ ಅಕ್ಟೋಬರ್ 27ರಂದು ಉಳಿದ ಬಾಕಿ ಮೊತ್ತ ಪಾವತಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಬಿಬಿಸಿ ಸ್ಟುಡಿಯೋ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
ಇದನ್ನೂ ಓದಿ:ನ್ಯಾಯಯುತ ಪರಿಹಾರ ನೀಡಿ ಅಭಿವೃದ್ಧಿ ಕಾರ್ಯಗಳಿಗೆ ಜಮೀನು ಪಡೆಯಿರಿ: ಹೈಕೋರ್ಟ್