ಬೆಂಗಳೂರು: ಕಳ್ಳತನ ಪ್ರಕರಣವೊಂದರ ಕುರಿತಂತೆ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಸೂಚನೆಯ ಹೊರತಾಗಿಯೂ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ತೋರಿದ್ದ ಕಾಟನ್‌ಪೇಟೆ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಆಗಿದ್ದ ಕೆ.ವೈ. ಪ್ರವೀಣ್ ವಿರುದ್ಧ ಇಲಾಖಾವಾರು ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಮನೆಯಲ್ಲಿ ನಡೆದ ಕಳ್ಳತನ ಪ್ರಕರಣವೊಂದರ ಕುರಿತು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಸೂಚನೆ ಮೇರೆಗೆ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಯನ್ನು ನೇಮಕ ಮಾಡುವಂತೆ ಕೋರಿ ಕಾಟನ್‌ಪೇಟೆಯ ನಿವಾಸಿ ಎಂ. ಪ್ರಕಾಶ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಸೂಚನೆ ನೀಡಿದೆ. ಅಲ್ಲದೇ, ಇಲಾಖಾವಾರ ತನಿಖೆ ಪೂರ್ಣಗೊಂಡ ಬಳಿಕ ವರದಿಯನ್ನು ಹೈಕೋರ್ಟ್ ರಿಜಿಸ್ಟ್ರಾರ್‌ಗೆ ಸಲ್ಲಿಸುವಂತೆ ನಿರ್ದೇಶನ ಕೊಟ್ಟಿದೆ.
ನ್ಯಾಯಾಲಯಗಳು ಕಾನೂನುಬದ್ಧವಾಗಿ ನೀಡುವ ಆದೇಶವನ್ನು ಪೋಲೀಸರು ಗಂಭೀರವಾಗಿ ಪರಿಗಣಿಸಿ ಜಾರಿ ಮಾಡಬೇಕು. ಇಲ್ಲವಾದಲ್ಲಿ ಸಂತ್ರಸ್ತರಾದವರ ಮೂಲಭೂತ ಹಕ್ಕು ಉಲ್ಲಂಘನೆಯಾಗುತ್ತದೆ. ಅಲ್ಲದೇ, ಈ ರೀತಿಯ ಅಧಿಕಾರಿ ವರ್ಗಗಳ ನಡೆ ಗಂಭೀರ ದುರ್ನಡತೆ ಮತ್ತು ದಂಡ ವಿಧಿಸಬಹುದಾದ ಉದಾಹರಣೆಯಾಗಿದೆ. ಇಂತಹ ಕರ್ತವ್ಯ ಲೋಪವನ್ನು ಸಹಿಸಲಾಗದು ಎಂದು ನ್ಯಾಯಪೀಠ ಹೇಳಿದೆ.
ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸೂಚನೆ ನೀಡಿದ ತಕ್ಷಣ ಪೊಲೀಸ್ ಅಧಿಕಾರಿಗಳು ಕಾನೂನು ಪ್ರಕಾರ ಎಫ್‌ಐಆರ್ ದಾಖಲಿಸಿ ತನಿಖೆ ಪ್ರಾರಂಭಿಸಬೇಕು. ಆದರೆ, ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿರ್ದೇಶನ ನೀಡಿದ ಐದೂವರೆ ತಿಂಗಳ ಬಳಿಕ ಪ್ರಕರಣ ದಾಖಲಿಸಲಾಗಿದೆ. ಈ ಬೆಳವಣಿಗೆಗೆ ಪೊಲೀಸ್ ಇನ್ಸ್ಪೆಕ್ಟರ್ ನಿರ್ಲಕ್ಷ್ಯತನ ಮತ್ತು ಬೇಜವಾಬ್ದಾರಿಯೇ ಕಾರಣ ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ. ಕೃತ್ಯಕ್ಕೆ ಕಾರಣವಾದ ಅಧಿಕಾರಿ ಕೆ.ವೈ ಪ್ರವೀಣ್ ಕಡತ ನಾಪತ್ತೆಯಾಗಿತ್ತು. ಹೀಗಾಗಿ ಪ್ರಕರಣ ದಾಖಲಿಸಲು ವಿಳಂಬವಾಗಿದೆ ಎಂಬುದಾಗಿ ಹೇಳಿಕೆ ನೀಡಿದ್ದಾರೆ. ಅಂದಮಾತ್ರಕ್ಕೆ ಪ್ರಕರಣವನ್ನು ಕೈ ಬಿಡುವುದಕ್ಕೆ ಸಾಧ್ಯವಿಲ್ಲ. ಪೊಲೀಸ್ ಇಲಾಖೆ ಪ್ರಮಾಣ ಪತ್ರದಲ್ಲಿ ತಿಳಿಸಿರುವಂತೆ ಅಧಿಕಾರಿಯ ಕರ್ತವ್ಯಲೋಪ ಒಪ್ಪಿಕೊಂಡಂತಾಗಿದೆ. ಹೀಗಾಗಿ ಆ ಅಧಿಕಾರಿಯ ವಿರುದ್ಧ ಇಲಾಖಾವಾರು ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಿ ಅರ್ಜಿ ಇತ್ಯರ್ಥಪಡಿಸಿತು.