ಬೆಂಗಳೂರು:ತೆರಿಗೆ ಪಾವತಿಸದ ಕಾರಣ ನಗರದ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್‌ಗೆ ಹಾಕಿರುವ ಬೀಗ ತೆರೆಯುವಂತೆ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನಿರ್ದೇಶಿಸಿದೆ.
ಮಾಲ್‌ಗೆ ಹಾಕಿರುವ ಬೀಗ ತೆರೆಯಲು ನಿರ್ದೇಶನ ಕೋರಿ ಮಂತ್ರಿ ಮಾಲ್ ಆಡಳಿತ ಮಂಡಳಿ ಹಾಗೂ ಹಮಾರಾ ಶೆಲ್ಟರ್ಸ್ ಪ್ರವೇಟ್ ಲಿಮಿಟೆಡ್ ಕಂಪನಿ ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠ, ಡಿ. 11ರ ರಾತ್ರಿ 12 ಗಂಟೆಯೊಳಗೆ ಆರ್‌ಟಿಜಿಎಸ್ ಮೂಲಕ 2 ಕೋಟಿ ರೂಪಾಯಿ ಹಣವನ್ನು ಬಿಬಿಎಂಪಿ ಖಾತೆಗೆ ಪಾವತಿಸಬೇಕು. ಬಳಿಕ ಶನಿವಾರ ಹಾಗೂ ಭಾನುವಾರ ರಜೆ ಇರುವುದರಿಂದ ಭದ್ರತೆಗೆ 4 ಕೋಟಿ ರೂಪಾಯಿಗೆ ಚೆಕ್ ಕೊಟ್ಟು, ಸೋಮವಾರ ಹಣ ಪಾವತಿಸಿ ಚೆಕ್ ಹಿಂಪಡೆಯಬಹುದು ಎಂದು ಪೀಠ ಮಧ್ಯಂತರ ಆದೇಶ ನೀಡಿದೆ.
ಅಲ್ಲದೇ, ತೆರಿಗೆ ಬಾಕಿ ಉಳಿಸಿಕೊಂಡಿರುವ ಬಗ್ಗೆ ಎಲ್ಲ ಸಮರ್ಪಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಬೇಕು. ಒಂದು ವೇಳೆ ಈ ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದರೆ ಮಧ್ಯಂತರ ಆದೇಶವನ್ನು ರದ್ದುಗೊಳಿಸಲಾಗುವುದು ಎಂದು ಮಂತ್ರಿಮಾಲ್ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿತು.
ಇದನ್ನೂ ಓದಿ:₹27 ಕೋಟಿ ತೆರಿಗೆ ಕಟ್ಟದ ಪ್ರತಿಷ್ಟಿತ ಮಂತ್ರಿ ಮಾಲ್ : ಮೂರನೇ ಬಾರಿಗೆ ಬಿತ್ತು ಬೀಗ
ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ.ಎಸ್ ಶ್ಯಾಮಸುಂದರ್ ವಾದ ಮಂಡಿಸಿ, ಬಿಬಿಎಂಪಿ ಬೀಗ ಹಾಕುವ ಬಗ್ಗೆ ಮುಂಚಿತವಾಗಿಯೇ ನೋಟಿಸ್ ನೀಡಿಲ್ಲ. ಕೋವಿಡ್ ಕಾರಣದಿಂದ ಸಕಾಲದಲ್ಲಿ ತೆರಿಗೆ ಪಾವತಿಸಲು ಸಾಧ್ಯವಾಗಿಲ್ಲ. ಮಾಲ್‌ಗೆ ಬೀಗ ಹಾಕಿರುವುದರಿಂದ ನೌಕರರು ಸಂಬಳವಿಲ್ಲದೆ ಪರದಾಡುವಂತಾಗಿದೆ. ಒಳಗಿರುವ ಒಂದೂವರೆ ಕೋಟಿ ಮೌಲ್ಯದ ವಸ್ತುಗಳು ಎರಡು ದಿನಗಳಲ್ಲೇ ನಾಶವಾಗುವ ಆತಂಕವಿದೆ. ಸದ್ಯ ಒಂದು ಕೋಟಿ ರೂಪಾಯಿ ಪಾವತಿಸುತ್ತೇವೆ. ಉಳಿದ ತೆರಿಗೆಯನ್ನು ಹಂತಹಂತವಾಗಿ ಪಾವತಿಸುತ್ತೇವೆ. ಆದ್ದರಿಂದ, ಇಂದೇ ಬೀಗ ತೆರೆಯುವಂತೆ ಬಿಬಿಎಂಪಿಗೆ ನಿರ್ದೇಶಿಸಬೇಕು ಎಂದು ಕೋರಿದರು.
ಬಿಬಿಎಂಪಿ ಪರ ವಕೀಲರು ವಾದಿಸಿ, ಅರ್ಜಿದಾರರು ಕೋವಿಡ್ ನೆಪ ಹೇಳುತ್ತಿರುವುದು ಸರಿಯಲ್ಲ. ನಾಲ್ಕು ವರ್ಷಗಳಿಂದ ಬಾಕಿಯನ್ನು ಉಳಿಸಿಕೊಂಡು ಬರುತ್ತಿರುವ ಮಂತ್ರಿ ಮಾಲ್ 33 ಕೋಟಿಗೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡಿದೆ. ಬಾಕಿ ತೆರಿಗೆ ಹಣವನ್ನು ಇದೇ ಡಿ. 5ರಂದು ಸಂಪೂರ್ಣ ಪಾವತಿಸುವುದಾಗಿ ವರ್ಷದ ಆರಂಭದಲ್ಲೇ ಮುಚ್ಚಳಿಕೆ ಬರೆದುಕೊಟ್ಟಿತ್ತು. ಆದರೆ, ಆಡಳಿತ ಮಂಡಳಿ ಹೇಳಿದ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಎಂದು ವಿವರಿಸಿದರು.
ಇದನ್ನೂ ಓದಿ:ರಸ್ತೆ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ದುರ್ಮರಣ.. CCTVಯಲ್ಲಿ ದೃಶ್ಯ ಸೆರೆ