ಕರ್ನಾಟಕ

karnataka

ETV Bharat / state

ಯಲಹಂಕದ ಕೊಡಿಗೇಹಳ್ಳಿ ಸರ್ಕಾರಿ ಜಮೀನು ಒತ್ತುವರಿ: ಅಧಿಕಾರಿಗಳು ಸೇರಿ 8 ಜನರ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ಸೂಚನೆ - ಈಟಿವಿ ಭಾರತ್​ ಕನ್ನಡ

ಸರ್ಕಾರಿ ಜಮೀನು ಒತ್ತುವರಿ ಪ್ರಕರಣ- ಬಿಡಿಎ ಅಧಿಕಾರಿಗಳು ಸೇರಿ 8 ಮಂದಿ ವಿರುದ್ಧ ಕ್ರಮ - ಹೈಕೋರ್ಟ್​ ಚಾಟಿ

ಯಲಹಂಕದ ಕೊಡಿಗೇಹಳ್ಳಿ ಸರ್ಕಾರಿ ಜಮೀನು ಒತ್ತುವರಿ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ಸೂಚನೆ
high-court-orders-action-against-officials-responsible-for-encroachment-of-government-land-in-kodigehalli-yalahanka

By

Published : Jan 10, 2023, 2:30 PM IST

ಬೆಂಗಳೂರು: ನಗರದ ಕೊಡಿಗೇಹಳ್ಳಿ ಮತ್ತು ಕೋತಿಹೊಸಹಳ್ಳಿಯಲ್ಲಿ ಖಾಸಗಿ ಕಂಪನಿಗಳು ಸರ್ಕಾರಿ ಜಮೀನು ಒತ್ತುವರಿ ಮಾಡಿ ವಸತಿ ಸಮುಚ್ಛಯ ನಿರ್ಮಿಸಲು ಕಾರಣವಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೆಲ ಅಧಿಕಾರಿಗಳು ಸೇರಿ ಎಂಟು ಮಂದಿ ವಿರುದ್ಧ ಕಾನೂನು ಮತ್ತು ಸೇವಾ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಬಿಡಿಎ ಆಯುಕ್ತರಿಗೆ ನಿರ್ದೇಶನ ನೀಡಿದೆ. ಅಲ್ಲದೆ, ಒತ್ತುವರಿಯಾಗಿರುವ ಭಾಗವನ್ನು ಮುಂದಿನ 15 ದಿನಗಳಲ್ಲಿ ತೆರವು ಗೊಳಿಸಬೇಕು ಎಂದು ಯಲಹಂಕ ತಹಶೀಲ್ದಾರ್ ಅವರಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಫೆಬ್ರವರಿ 2ಕ್ಕೆ ಮುಂದೂಡಿದೆ.

ಸರ್ಕಾರಿ ಜಾಗದ ಒತ್ತುವರಿಯನ್ನು ತೆರವುಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕೊಡಿಗೆಹಳ್ಳಿಯ ನಿವಾಸಿ ಅಶ್ವತ್ಥ ನಾರಾಯಣ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ವಿಚಾರಣೆ ವೇಳೆ ಸರ್ಕಾರದ ಸರ್ಕಾರಿ ವಕೀಲರಾದ ಪ್ರತಿಮಾ ಹೊನ್ನಾಪುರ, ಈ ಹಿಂದೆ ಹೈಕೋರ್ಟ್ ನಿರ್ದೇಶನದ ಮೇರೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಒತ್ತುವರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದರು. ಜತೆಗೆ, ಯಲಹಂಕ ತಹಶೀಲ್ದಾರ ಅವರು ಸಲ್ಲಿಸಿದ್ದ ಪ್ರಮಾಣ ಪತ್ರವನ್ನು ಸಲ್ಲಿಸಿದರು.
ಇದನ್ನು ಪರಿಶೀಲಿಸಿದ ನ್ಯಾಯಪೀಠ, ಸರ್ಕಾರಿ ಜಮೀನಿನ ಒತ್ತುವರಿಗೆ ಕಾರಣವಾದ ಬಿಡಿಎ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಡಿಎ ಆಯುಕ್ತರಿಗೆ ನಿರ್ದೇಶನ ನೀಡಿತು. ಜತೆಗೆ, ಮುಂದಿನ 15 ದಿನಗಳಲ್ಲಿ ಒತ್ತುವರಿ ತೆರವು ಮಾಡಿ ವರದಿ ಸಲ್ಲಿಸುವಂತೆ ಯಲಹಂಕ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿತು.

ಒತ್ತುವರಿ ಪ್ರಕ್ರಿಯೆ ಮುಂದೂಡಲು ಮನವಿ..ಈ ಸಂದರ್ಭದಲ್ಲಿ ಅದೇ ವಸತಿ ಸಮುಚ್ಚಯದಲ್ಲಿ ಮನೆ ಹೊಂದಿರುವವರ ಪರ ವಕೀಲರು ಹಾಜರಾಗಿ, ತಕ್ಷಣ ಒತ್ತುವರಿ ತೆರವು ಮಾಡಿದಲ್ಲಿ ನಮ್ಮ ಕಕ್ಷಿದಾರರಿಗೆ ತೊಂದರೆಯಾಗಲಿದೆ. ಹೀಗಾಗಿ ಒತ್ತುವರಿ ಪ್ರಕ್ರಿಯೆ ಮುಂದೂಡಲು ಮನವಿ ಮಾಡಿದರು. ಇದರಿಂದ ತೀವ್ರ ಅಸಮಾಧಾನ ಗೊಂಡ ನ್ಯಾಯಪೀಠ, ಈ ಸಂದರ್ಭದಲ್ಲಿ ಒತ್ತುವರಿ ತೆರವು ಮಾಡಬಾರದು ಎಂದಾದರೆ ನಮ್ಮ ಆದೇಶಕ್ಕೆ ಬೆಲೆ ಏನಿದೆ ?, ಒತ್ತುವರಿ ಕಟ್ಟಡದಲ್ಲಿ ಮನೆ ಪಡೆದಿರುವವರಿಗೆ ಈ ಕುರಿತು ಜವಾಬ್ದಾರಿ ಇಲ್ಲವೇ? ಎಂದು ಪ್ರಶ್ನಿಸಿತು. ಜತೆಗೆ, ನಿಮ್ಮ ಅಹವಾಲನ್ನು ತಹಶೀಲ್ದಾರ್ ಅವರ ಬಳಿ ಸಲ್ಲಿಸಿ ಎಂದು ಸೂಚನೆ ನೀಡಿತು.

ಅಧಿಕಾರಿಗಳ ತಪ್ಪು ಗಮನಕ್ಕೆ.. ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ಎನ್ಟಿಐ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ವಸತಿ ಕಟ್ಟಡ ನಿರ್ಮಿಸಿದೆ. ಅಚ್ಚರಿ ಎಂದರೆ ಸರ್ಕಾರದ ಅಧಿಕಾರಿಗಳೇ ನಕ್ಷೆ ಮಂಜೂರಾತಿ ಮಂಜೂರು ಮಾಡಿದ್ದಾರೆ. ಕಟ್ಟಡಕ್ಕೆ ವಿದ್ಯುತ್ ಸಂಪರ್ಕವನ್ನೂ ಕಲ್ಪಿಸಲಾಗಿದೆ. ಇದು ಅಧಿಕಾರಗಳ ದಿವ್ಯ ನಿರ್ಲಕ್ಷ್ಯ ಹಾಗೂ ಸರ್ಕಾರಿ ಪ್ರಾಧಿಕಾರಿಗಳ ನಡುವೆ ಸೂಕ್ತ ಸಹಕಾರ ಇಲ್ಲದಿರುವುದನ್ನು ಪ್ರತಿಬಿಂಬಿಸುತ್ತದೆ. ಹಾಗಾಗಿ, ಬೆಂಗಳೂರು ನಗರ ಜಿಲ್ಲಾಧಿಕಾರಿಯು ನಕ್ಷೆ ಮಂಜೂರಾತಿ ನೀಡಿರುವ ಅಧಿಕಾರಿಗಳ ವಿಚಾರಣೆ ನಡೆಸಬೇಕು. ಪ್ರಕರಣ ಕುರಿತ ಎಲ್ಲಾ ದಾಖಲೆಗಳನ್ನು ಪರಿಶೀಲಿಸಬೇಕು. ಅಧಿಕಾರಿಗಳು ತಪ್ಪು ಎಸಗಿರುವುದನ್ನು ಗಮನಿಸಿದಲ್ಲಿ ಆ ಕುರಿತು ನಾಲ್ಕು ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿಸಿತ್ತು.

ಅಲ್ಲದೆ, ಕಟ್ಟಡ ನಿರ್ಮಾಣವಾಗಿ ಹಲವು ವರ್ಷಗಳೇ ಕಳೆದಿವೆ. ಇಲ್ಲಿಯವರೆಗೂ ಪ್ರಕರಣವು ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ? ಕಟ್ಟಡ ರಾತ್ರೋರಾತ್ರಿ ನಿರ್ಮಾಣವಾಯಿತೇ? ಕಟ್ಟಡ ನಿರ್ಮಾಣಕ್ಕೆ ಸಮಯ ಬೇಕಿರುತ್ತದೆಯಲ್ಲವೇ? ಆದು ಅಧಿಕಾರಿಗಳು ಗಮನ ಹರಿಸದಿರುವುದು ಸರಿಯಲ್ಲ. ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದರೆ ಆಗ ಜಾಗ/ನಿವೇಶನದ ಕುರಿತ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುವುದಿಲ್ಲವೇ? ನಗರದಲ್ಲಿ ಕಟಡ ನಿರ್ಮಾಣದ ಬಗ್ಗೆ ಕಾಲ ಕಾಲಕ್ಕೆ ಪರಿಶೀಲನೆ ನಡೆಸುವುದಿಲ್ಲವೇ? ಅಧಿಕಾರಿಗಳು ಕಚೇರಿಯಲ್ಲಿ ಮೂಕ ಪ್ರೇಕ್ಷರಾಗಿಯೇ ಕೂತಿರುತ್ತಾರೆಯೇ? ಎಂದು ಪ್ರಶ್ನಿಸಿತ್ತು.

ಇದನ್ನೂ ಓದಿ: ಬೆಂಗಳೂರಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತ.. ತಾಯಿ ಮಗ ಸಾವು, ಅಪ್ಪ ಮಗಳ ಸ್ಥಿತಿ ಗಂಭೀರ

For All Latest Updates

ABOUT THE AUTHOR

...view details