ಬೆಂಗಳೂರು:ಕುಡಿತದ ಚಟ ಬಿಡಿಸಲು ಬಲವಂತವಾಗಿ ಡ್ರಗ್ ಡಿಅಡಿಕ್ಷನ್ ಅಂಡ್ ರಿಹ್ಯಾಬಿಲಿಟೇಷನ್ ಸೆಂಟರ್‌ಗೆ (ಮದ್ಯಪಾನ ಚಟ ಬಿಡಿಸುವ ಮತ್ತು ಪುನರ್ವಸತಿ ಕೇಂದ್ರ) ಸೇರಿಸಲಾಗಿದ್ದ ವ್ಯಕ್ತಿಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ.
ಅಲ್ಲದೆ ಬೆಂಗಳೂರು ನಗರವೂ ಸೇರಿದಂತೆ ರಾಜ್ಯದಲ್ಲಿ ಎಷ್ಟು ಡಿಅಡಿಕ್ಷನ್ ಸೆಂಟರ್ಗಳಿಗೆ ಮತ್ತು ಅವುಗಳ ಕಾರ್ಯ ವಿಧಾನವೇನು ಎಂಬುದನ್ನು ವಿಚಾರಣೆ ಮಾಡಿ ವರದಿ ನೀಡುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ನಿರ್ದೇಶಿಸಿದೆ.
ಯಶವಂತಪುರ ನಿವಾಸಿ ರವಿ ಎಂಬಾತನನ್ನು ಕುಡಿತದ ಚಟ ಬಿಡಿಸಲು ಆತನ ಅಕ್ಕ ಶೈಲಾ ಕೆಂಗೇರಿಯ ಫೋರ್ಎಸ್ ಡ್ರಗ್ ಡಿಅಡಿಕ್ಷನ್ ಸೆಂಟರ್‌ಗೆ ಒತ್ತಾಯಪೂರ್ವಕವಾಗಿ ಸೇರಿಸಿದ್ದನ್ನು ಪ್ರಶ್ನಿಸಿ ಸಂಬಂಧಿ ಸಚಿನ್ ದಾಖಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನ್ಯಾ. ಎನ್.ಎಸ್. ಸತ್ಯನಾರಾಯಣ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ತಮ್ಮ ಕಕ್ಷಿದಾರ ರವಿಯನ್ನು ಬಲವಂತವಾಗಿ ಡಿಅಡಿಕ್ಷನ್ ಸೆಂಟರ್‌ಗೆ ದಾಖಲಿಸಲಾಗಿದೆ. ರವಿ ಸೋದರಿ ಶೈಲಾ ಆಸ್ತಿ ವ್ಯಾಜ್ಯದಲ್ಲಿ ಅನುಕೂಲ ಮಾಡಿಕೊಳ್ಳಲು ಬಲವಂತವಾಗಿ ಅಲ್ಲಿಗೆ ಸೇರಿಸಿದ್ದಾರೆ. ಹೀಗಾಗಿ 235 ದಿನಗಳಿಂದ ಬಂಧನದಲ್ಲಿ ಬದುಕುತ್ತಿರುವ ರವಿಯನ್ನು ಬಿಡುಗಡೆ ಮಾಡುವಂತೆ ಡಿಅಡಿಕ್ಷನ್ ಸೆಂಟರ್ ಮತ್ತು ಜ್ಞಾನಭಾರತಿ ಠಾಣೆ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿದರು.
ಅರ್ಜಿದಾರರ ಪರ ವಕೀಲರ ಮನವಿ ಪುರಸ್ಕರಿಸಿದ ಪೀಠ, ಒತ್ತಾಯಪೂರ್ವಕವಾಗಿ ಯಾವುದೇ ವ್ಯಕ್ತಿಯನ್ನು ಕೂಡಿಹಾಕುವಂತಿಲ್ಲ ಎಂದು ಅಭಿಪ್ರಾಯಪಟ್ಟು, ಕೂಡಲೇ ರವಿ ಬಿಡುಗಡೆ ಮಾಡುವಂತೆ ಡಿಅಡಿಕ್ಷನ್ ಸೆಂಟರ್ ಮತ್ತು ಪೊಲೀಸರಿಗೆ ಆದೇಶಿಸಿತು.
ಇದೇ ವೇಳೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಎಷ್ಟು ಡಿಅಡಿಕ್ಷನ್ ಸೆಂಟರ್ ಇವೆ? ಅಲ್ಲಿ ಎಷ್ಟು ಜನ ಸಂಪನ್ಮೂಲ ವ್ಯಕ್ತಿಗಳು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ? ಅಲ್ಲಿ ಯಾವೆಲ್ಲಾ ಚಟುವಟಿಕೆಗಳನ್ನು ನಡೆಸಲಾಗುತ್ತದೆ? ಎಂಬ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಪೊಲೀಸ್ ಮಹಾ ನಿರ್ದೇಶಕರಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.