ಕರ್ನಾಟಕ

karnataka

ETV Bharat / state

ನಕಲಿ ವಿಲ್​ ದೃಢೀಕರಿಸಿದ ಆರೋಪ: ವಕೀಲರ ವಿರುದ್ಧದ ಪ್ರಕರಣ ರದ್ದು - ಈಟಿವಿ ಭಾರತ್ ಕನ್ನಡ ಸುದ್ದಿ

ನಕಲಿ ವಿಲ್ ದೃಢೀಕರಿಸಿದ ಆರೋಪದಲ್ಲಿ ವಕೀಲರೊಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್​ ರದ್ದುಪಡಿಸಿದೆ.

ಹೈಕೋರ್ಟ್​
ಹೈಕೋರ್ಟ್​

By

Published : Apr 10, 2023, 10:37 PM IST

ಬೆಂಗಳೂರು : ನಕಲಿ ವಿಲ್ ದೃಢೀಕರಿಸಿದ (ಅಟೆಸ್ಟ್) ಆರೋಪ ಸಂಬಂಧ ನೋಟರಿಯೊಬ್ಬರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ವಿಚಾರಣೆಗೆ ಅಂಗೀಕರಿಸಿದ ನಗರದ 44ನೇ ಎಸಿಎಂಎಂ ನ್ಯಾಯಾಲಯದ ಕ್ರಮ ರದ್ದುಪಡಿಸುವಂತೆ ಕೋರಿ ನೋಟರಿ ಜಿ.ಎನ್.ವೆಂಕಟರಮಣಪ್ಪ ಅವರು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಟರಾಜನ್ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಖಾಸಗಿ ವ್ಯಕ್ತಿಗಳು ಖಾಸಗಿ ದೂರು ಸಲ್ಲಿಸಿದ್ದರು. ಅದನ್ನು ಆಧರಿಸಿ ವಿಚಾರಣಾ ನ್ಯಾಯಾಲಯವು ದೂರನ್ನು ವಿಚಾರಣೆಗೆ ಅಂಗೀಕರಿಸಿದೆ. ಇದು ನೋಟರೀಸ್ ಕಾಯ್ದೆ-1952ರ ಸೆಕ್ಷನ್ 13ಕ್ಕೆ ವಿರುದ್ಧವಾಗಿದೆ. ಕಾನೂನು ಪ್ರಕಾರ ನಕಲಿ ವಿಲ್ ದೃಢೀಕರಿಸಿದ ಆರೋಪ ಸಂಬಂಧ ಕೇಂದ್ರ ಅಥವಾ ರಾಜ್ಯ ಸರ್ಕಾರ ಅಧಿಕಾರಿಯು ಲಿಖಿತ ರೂಪದಲ್ಲಿ ದೂರು ಸಲ್ಲಿಸಬೇಕಾಗುತ್ತದೆ. ಈ ನಿಯಮ ಪ್ರಕರಣದಲ್ಲಿ ಪಾಲನೆಯಾಗಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ಎಲ್ಲ ಆರೋಪಿಗಳು ಸೇರಿಕೊಂಡು ದುರುದ್ದೇಶದಿಂದ ನಕಲಿ ವಿಲ್ ಸಿದ್ಧಪಡಿಸಿದ್ದಾರೆ ಎಂಬುದಾಗಿ ದೂರುದಾರರು ಅಸ್ಪಷ್ಟ ಆರೋಪ ಮಾಡಿದ್ದಾರೆಯೇ ಹೊರತು ಪೂರಕ ಸಾಕ್ಷ್ಯಾಧಾರ ಒದಗಿಸಿಲ್ಲ. ಆದ್ದರಿಂದ ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಪ್ರಕರಣ ಹಾಗೂ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ವಿವರಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರು ಇತರೆ ಆರು ಆರೋಪಿಗಳೊಂದಿಗೆ ಜೊತೆಗೂಡಿ ಯಲಹಂಕದ ನಿವಾಸಿ ಎಸ್ ಭಾರತಿ ಎಂಬುವವರ ಪತಿಯ ಹೆಸರಿನಲ್ಲಿ 2013ರ ಆ.8ರಂದು ನಕಲಿ ವಿಲ್ ಸಿದ್ಧಪಡಿಸಿದ್ದರು. ಅದಕ್ಕೆ ಅರ್ಜಿದಾರರು ದೃಢೀಕರಿಸಿದ್ದಾರೆ ಎಂಬ ಆರೋಪವಿತ್ತು. ಈ ಕುರಿತು ಭಾರತಿ ಮತ್ತು ವೈ.ವಿ.ಚರಣ್ ಎಂಬುವರು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಸಿದ್ದರು.

ಪ್ರಕರಣ ಕುರಿತು ತನಿಖೆ ನಡೆಸುವಂತೆ ಯಲಹಂಕ ಓಲ್ಡ್ ಟೌನ್ ಠಾಣೆ ಪೊಲೀಸರಿಗೆ ನ್ಯಾಯಾಲಯ ನಿರ್ದೇಶಿಸಿತ್ತು. ಅದರಂತೆ ಪೊಲೀಸರು ತನಿಖೆ ನಡೆಸಿ ಬಿ ರಿಪೋರ್ಟ್ ಸಲ್ಲಿಸಿದ್ದರು. ಅದನ್ನು ಆಕ್ಷೇಪಿಸಿ ದೂರುದಾರರು ಸಲ್ಲಿಸಿದ್ದ ಪ್ರತಿಭಟನಾ ಅರ್ಜಿಯನ್ನು ಪುರಸ್ಕರಿಸಿದ್ದ 44ನೇ ಎಸಿಎಂಎ ನ್ಯಾಯಾಲಯ, ಬಿ ರಿಪೋರ್ಟ್ ಅನ್ನು ತಿರಸ್ಕರಿಸಿತ್ತು. ಅರ್ಜಿದಾರರು ಸೇರಿ ಎಲ್ಲಾ ಆರೋಪಿಗಳ ವಿರುದ್ಧ ವಂಚನೆ, ಅಪ್ರಮಾಣಿಕತೆ, ಕಿಡಿಗೇಡಿತನ, ನಕಲಿ ದಾಖಲೆ ಸೃಷ್ಟಿ, ಸುಳ್ಳು ಹೇಳಿಕೆ ದಾಖಲು, ನಕಲಿ ದಾಖಲೆಯನ್ನು ಅಸಲಿಯಾಗಿ ಬಳಕೆ, ಅಪರಾಧಿಕ ಒಳಸಂಚು ಆರೋಪ ಸಂಬಂಧ ಕಾಗ್ನಿಜೆನ್ಸ್ ತೆಗೆದುಕೊಂಡಿತ್ತು. ಇದರಿಂದ ಪ್ರಕರಣ ರದ್ದು ಕೋರಿ ವೆಂಕಟರಮಣಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರ ಪರ ವಕೀಲರು, ಪ್ರಕರಣದಲ್ಲಿ ವೆಂಕಟರಮಣಪ್ಪ ಅವರನ್ನು 5ನೇ ಆರೋಪಿಯನ್ನಾಗಿ ಮಾಡಲಾಗಿದೆ. ಅವರು ವಿಲ್ ಅನ್ನು ದೃಢೀಕರಿಸಿದ್ದಾರೆ. ನೋಟರಿಯು ದಾಖಲೆ ಸಲ್ಲಿಸಿದ ವ್ಯಕ್ತಿಗಳ ಉಪಸ್ಥಿತಿಯಲ್ಲಿ ದೃಢೀಕರಣ ಮಾಡಬೇಕಾಗುತ್ತದೆ. ಈ ನಿಯಮವನ್ನು ಅರ್ಜಿದಾರರು ಪಾಲಿಸಿದ್ದಾರೆ. ನೋಟರೀಸ್ ಕಾಯ್ದೆ-1952ರ ಸೆಕ್ಷನ್ ಪ್ರಕಾರ, ಯಾವುದೇ ದಾಖಲೆಯನ್ನು ನೋಟರಿ ದೃಢೀಕರಿಸಲು ಅವಕಾಶವಿದೆ. ಖಾಸಗಿ ವ್ಯಕ್ತಿಗಳು ಸಲ್ಲಿಸಿದ ದೂರು ಆಧರಿಸಿ ಅರ್ಜಿದಾರರ ವಿರುದ್ಧ ಕಾಗ್ನಿಜೆನ್ಸ್ ತೆಗೆದುಕೊಳ್ಳಲಾಗಿದೆ. ಆದರೆ, ಕಾನೂನು ಪ್ರಕಾರ ಕೇಂದ್ರ ಅಥವಾ ರಾಜ್ಯ ಸರ್ಕಾರಿ ಅಧಿಕಾರಿ ದೂರು ದಾಖಲಿಸುವುದು ಕಡ್ಡಾಯ. ಆಗ ಮಾತ್ರ ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಬೇಕಾಗುತ್ತದೆ. ವಿಚಾರಣಾ ನ್ಯಾಯಾಲಯವು ಈ ನಿಯಮ ಪಾಲಿಸದ ಹಿನ್ನೆಲೆಯಲ್ಲಿ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದ್ದರು.

ಇದನ್ನೂ ಓದಿ :ಪಿಎಸ್​ಐ ಹಗರಣ: ಜೂನ್​ 15ರ ಒಳಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್​ ಸೂಚನೆ

ABOUT THE AUTHOR

...view details