ಬೆಂಗಳೂರು :ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಅಲರವಾಡದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಸ್ಥಾಪನೆಗೆ ಎರಡು ಕೋಟಿ ರೂ. ಖರ್ಚು ಮಾಡಿದ ನಂತರ ಕಾಮಗಾರಿ ಸ್ಥಗಿತಗೊಳಿಸಿ ಮತ್ತೊಂದು ಜಾಗದಲ್ಲಿ ಹೊಸ ಘಟಕ ಸ್ಥಾಪಿಸಲು ಕಾಮಗಾರಿ ಕೈಗೊಂಡ ಪ್ರಕರಣದ ತನಿಖೆಯನ್ನು ಹೈಕೋರ್ಟ್ ಲೋಕಾಯುಕ್ತಕ್ಕೆ ವಹಿಸಿದೆ.
ಈ ವಿಚಾರವಾಗಿ ನಾರಾಯಣ ಬೈರು ಸಾವಂತ್ ಸೇರಿ ಐವರು ಸ್ಥಳೀಯರು ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಹಂಗಾಮಿ ಸಿಜೆ ಎಸ್ ಸಿ ಶರ್ಮಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ಪೀಠ, ಪಾಲಿಕೆ ಆಯುಕ್ತರು ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹಣ ವೆಚ್ಚ ಮಾಡಿಲ್ಲ ಎಂದು ಹೇಳಲಾಗಿದೆ.
ಆದರೆ, ಬೇರೆ ದಾಖಲೆಗಳನ್ನು ಪರಿಶೀಲಿಸಿದರೆ ಹಣ ಖರ್ಚಾಗಿರುವುದು ಗೊತ್ತಾಗುತ್ತಿದೆ. ಇದೊಂದು ಗಂಭೀರ ವಿಚಾರ. ಈ ಬಗ್ಗೆ ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸಿ, ಹಣ ಖರ್ಚಾಗಿದ್ದರೆ ಎಷ್ಟು ಹಣ ಖರ್ಚಾಗಿದೆ ಎಂಬ ಬಗ್ಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ನ.25ಕ್ಕೆ ಮುಂದೂಡಿತು.