ಬೆಂಗಳೂರು: ವಿಮೆ ಹೊಂದಿರುವ ವಾಹನ ಅಪಘಾತಕ್ಕೀಡಾದಲ್ಲಿ ನೋಂದಣಿಯಾಗದಿದ್ದರೂ ಘಟನೆಯಿಂದ ತೊಂದರೆಗೊಳಗಾದ ಮೂರನೇ ವ್ಯಕ್ತಿಗೆ ಪರಿಹಾರ ನೀಡಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ವಿಮಾ ಕಂಪೆನಿಯವರು ಮೂರನೇ ವ್ಯಕ್ತಿಗೆ ಪರಿಹಾರ ನೀಡಲು ಜವಾಬ್ದಾರನಾಗಿರುತ್ತಾರೆ. ವಿಮಾ ಕಂಪೆನಿ ಆ ಮೊತ್ತವನ್ನು ವಿಮಾದಾರರಿಂದ ಮರು ಪಡೆದುಕೊಳ್ಳಲು ಅವಕಾಶವಿದೆ ಎಂದು ಪೀಠ ತಿಳಿಸಿದೆ.
ಹಾವೇರಿ ಜಿಲ್ಲೆ ರಾಣಿಬೆನ್ನೂರಿನ ಬಸವರಾಜ ಬೀರಪ್ಪ ಕಂಬಳಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್ಪಿ ಸಂದೇಶ್ ಅವರಿದ್ದ ನ್ಯಾಯಪೀಠ ಆದೇಶ ನೀಡಿದೆ. ಅಪಘಾತ ನಡೆದ ದಿನದಂದು ಘಟನೆಗೆ ಕಾರಣವಾದ ವಾಹನ ನೋಂದಣಿಯಾಗಿಲ್ಲ. ತಾತ್ಕಾಲಿಕ ನೋಂದಣಿಯಾಗಿ ಅದರ ಅವಧಿ ಮೀರಿದೆ. ಹೀಗಿರುವಾಗ ಘಟನೆಯಿಂದ ತೊಂದರೆಗೊಳಗಾದವರು ಮೂರನೇ ವ್ಯಕ್ತಿಯಾಗಿದ್ದಾರೆ. ಹೀಗಾಗಿ ಮೂರನೇ ವ್ಯಕಿಗೆ ಪರಿಹಾರವನ್ನು ವಿಮಾ ಕಂಪೆನಿಯೇ ಪಾವತಿಸಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ ಹೀಗಿದೆ..:ರಾಣೆಬೆನ್ನೂರಿನ ಬಸವರಾಜ ಬೀರಪ್ಪ ಕಂಬಳಿ ಅವರು ಕಚೇರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದಿತ್ತು. ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಇದರಿಂದ ಬಸವರಾಜು ಅವರು ದಾವಣಗೆರೆಯ ಸಿಜಿ ಆಸ್ಪತ್ರೆ, ಎಸ್‌ಎಸ್ ಆಸ್ಪತ್ರೆ ಮತ್ತು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಅಪಘಾತಕ್ಕೆ ಕಾರಣವಾಗಿದ್ದ ಟಾಟಾ ಏಸ್ ವಾಹನ ಮಾಲೀಕರು ಕೋರಮಂಡಲಂ ಜನರಲ್ ಇನ್ಷೂರೆನ್ಸ್ ಕಂಪೆನಿಯಲ್ಲಿ ವಿಮೆ ಪಡೆದುಕೊಂಡಿದ್ದರು. ಆದರೆ, ವಾಹನ ತಾತ್ಕಾಲಿಕ ನೋಂದಣಿ ಸಂಖ್ಯೆ ಪಡೆದುಕೊಂಡಿದ್ದು, ಅದರ ಅವಧಿ ಮುಕ್ತಾಯವಾಗಿತ್ತು.