ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 20 ಗ್ರೂಪ್ ಡಿ ಸಿಬ್ಬಂದಿ ಸೇರಿದಂತೆ 50 ನೌಕರರ ಸೇವೆ ಕಾಯಂಗೊಳಿಸುವ ಕುರಿತು ವಿವಿ ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಗಣಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಈ ಕುರಿತಂತೆ ವಿವಿ ನೌಕರ ವಿ.ಹನುಮಂತಪ್ಪ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ. 20ರಿಂದ 25 ವರ್ಷ ಸೇವೆ ಸಲ್ಲಿಸಿರುವ ಸಿಬ್ಬಂದಿಯನ್ನು ಕಾಯಂಗೊಳಿಸುವ ವಿಚಾರದಲ್ಲಿ ಸರ್ಕಾರ ಹಾಗೂ ವಿವಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಪೀಠ ಹೇಳಿದೆ.
ವಿಶ್ವವಿದ್ಯಾಲಯದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ 43 ರಿಂದ 57 ವರ್ಷವಾಗಿರುವ ಅರ್ಜಿದಾರರ ಸೇವೆಯನ್ನು ಕಾಯಂಗೊಳಿಸುವ ಕುರಿತು ವಿವಿ 2019ರ ಸೆ.12ರಂದು ಕಳುಹಿಸಿರುವ ಪ್ರಸ್ತಾವವನ್ನು ರಾಜ್ಯ ಸರ್ಕಾರ ಕಾನೂನು ವ್ಯಾಪ್ತಿಯಲ್ಲಿ 4 ತಿಂಗಳಲ್ಲಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಆದೇಶದಲ್ಲಿ ಒಂದು ವೇಳೆ ಸರ್ಕಾರ ಅರ್ಜಿದಾರರ ಸೇವೆಯನ್ನು ಕಾಯಂಗೊಳಿಸುವ ಕುರಿತು ನಿರ್ಧಾರ ಕೈಗೊಳ್ಳುವ ವಿವೇಚನೆಯನ್ನು ವಿವಿಗೆ ಬಿಟ್ಟರೂ ವಿಶ್ವವಿದ್ಯಾಲಯ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂದು ನ್ಯಾಯಪೀಠ ಆದೇಶಿಸಿದೆ.
24 ವರ್ಷಗಳಿಂದ ಸೇವೆ ಪಡೆದಿರುವ ವಿವಿ ತನ್ನ ಸಿಬ್ಬಂದಿಯನ್ನು ಕೈಬಿಡುವುದು ಸರಿಯಲ್ಲ. ಅವರಲ್ಲಿ ವಯಸ್ಸಿದ್ದಾಗ, ಹುಮ್ಮಸಿದ್ದಾಗ ದುಡಿಸಿಕೊಂಡು ನಡುನೀರಿನಲ್ಲಿ ಕೈಬಿಡುವುದು ನ್ಯಾಯಯುತವಲ್ಲ, ವಿವಿ ಅವರಿಂದ ಎಲ್ಲ ಸೇವೆಯನ್ನು ಪಡೆದುಕೊಂಡಿದೆ. ಇದೀಗ ರಾಜ್ಯ ಸರ್ಕಾರ 1.36 ಕೋಟಿ ರೂಪಾಯಿ ಆರ್ಥಿಕ ಹೊರೆ ಬೀಳುತ್ತದೆಂಬ ಕಾರಣಕ್ಕೆ ಅವರ ಸೇವೆಯನ್ನು ಸಕ್ರಮಗೊಳಿಸುವ ಪ್ರಸ್ತಾವ ಒಪ್ಪದಿರುವುದು ಸಮಂಜಸವಲ್ಲ ಎಂದು ಸರ್ಕಾರದ ಧೋರಣೆಯನ್ನು ಟೀಕಿಸಿದೆ.
ಅರ್ಜಿದಾರರು ಆರಂಭದಲ್ಲಿ ಅತ್ಯಂತ ಕಡಿಮೆ ವೇತನಕ್ಕೆ ಹಲವು ವರ್ಷಗಳು ದುಡಿದಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಇದೀಗ ಸಕ್ರಮಗೊಳಿಸದಿದ್ದರೆ ಅದು ಸಂವಿಧಾನದ ವಿಧಿ 14ರಡಿ ಮೂಲಭೂತ ಹಕ್ಕಿನ ಉಲ್ಲಂಘನೆ ಯಾಗಲಿದೆ. ಅವರು ಪುನಃ ಸರ್ಕಾರ ಮತ್ತು ವಿವಿ ನಡುವೆ ಅಲೆಯುವಂತಹ ಸ್ಥಿತಿ ಸೃಷ್ಟಿಸಬಾರದು ಎಂದು ಪೀಠ ಸರ್ಕಾರ ಮತ್ತು ವಿವಿಗೆ ಆದೇಶಿಸಿದೆ.