ಬೆಂಗಳೂರು: ರಾಜ್ಯದ ಆನೆಗಳ ಶಿಬಿರಗಳ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಿ ಅಕ್ಟೋಬರ್ ಅಂತ್ಯದೊಳಗೆ ಯಾವುದೇ ಕಾರಣಗಳನ್ನು ನೀಡದೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.
ನ್ಯಾಯವಾದಿ ಎನ್.ಪಿ ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅವರಿದ್ದ ವಿಭಾಗೀಯ ನ್ಯಾಯಪೀಠ,ಆನೆ ಶಿಬಿರಗಳ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಲು ಬೇರೆಬೇರೆ ಕಾರಣ ಹೇಳುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿತು.
ಅರ್ಜಿದಾರರು ರಾಜ್ಯದ ಆನೆ ಶಿಬಿರದಲ್ಲಿ ಆನೆಗಳ ಸಾವನ್ನ ತಡೆಗಟ್ಟಲು ತಜ್ಞರ ಸಮಿತಿಯನ್ನು ಸರ್ಕಾರ ರಚಿಸಿದ್ದು, ಈ ಸಮಿತಿಯಲ್ಲಿ ಇಬ್ಬರು ತಜ್ಞರು ಅಧ್ಯಯನ ನಡೆಸಲು ನಿರಾಕರಿಸಿದ್ದು, ಈಗ ಅವರನ್ನ ಬದಲಾವಣೆ ಮಾಡಲು ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ತಜ್ಞರ ಸಮಿತಿಯಲ್ಲಿ ಪ್ರೊ.ಆರ್ ಸುಕುಮಾರ್, ಥಾಮಸ್ ಮ್ಯಾಥ್ಯೂ, ಸುರೇಂದ್ರ ವರ್ಮ ಮತ್ತು ಕೆ ಎಂ ಚಿನ್ನಪ್ಪ ಇವರುಗಳು ಇದ್ದಾರೆ. ಆದರೆ, ಪ್ರೊ. ಆರ್. ಸುಕುಮಾರ್ ಹಾಗೂ ಥಾಮಸ್ ಮ್ಯಾಥ್ಯೂ ವೈಯಕ್ತಿಕ ಕಾರಣಗಳಿಂದಾಗಿ ತಮ್ಮನ್ನ ಬದಲಾವಣೆ ಮಾಡಬೇಕೆಂದು ಕೋರಿದ್ದಾರೆ. ಈ ಹಿನ್ನೆಲೆ ಇವರ ಬದಲಾಗಿ ಡಾ. ಕಲೈವಣ್ಣನ್ ಹಾಗೂ ಡಾ. ಅಶ್ರಫ್ ಅವರನ್ನು ನೇಮಕ ಮಾಡಲಾಗಿದೆ ಎಂದರು. ಈ ವೇಳೆ ಸರ್ಕಾರಿ ಪರ ವಕೀಲರು ಆನೆಗಳು ದಸರಾಕ್ಕೆ ಹೋದರೆ ಶಿಬಿರಕ್ಕೆ ಹೋಗಿ ಅಧ್ಯಯನ ನಡೆಸಲು ಸಾಧ್ಯವಿಲ್ಲವೆಂದು ತಿಳಿಸಿದರು.